ADVERTISEMENT

ಕೀನ್ಯಾ ದಾಳಿ: ಇಬ್ಬರು ಉಗ್ರರ ಹತ್ಯೆ

ಹಂತಕರ ದಮನಕ್ಕೆ ಮುಂದುವರಿದ ಕಾರ್ಯಾಚರಣೆ: ಮೃತರ ಸಂಖ್ಯೆ 69ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ನೈರೋಬಿ(ಎಎಫ್‌ಪಿ/ಐಎಎನ್‌ಎಸ್‌): ಇಲ್ಲಿನ ವೆಸ್ಟ್‌ಗೇಟ್‌ ಶಾಪಿಂಗ್‌ ಮಾಲ್‌ ನಲ್ಲಿ ಸೋಮಾಲಿಯಾ ಮೂಲದ ಅಲ್‌ ಶಬಾಬ್ ಉಗ್ರರ ಗುಂಪಿನ ಹಿಡಿತ ದಲ್ಲಿರುವ ಒತ್ತೆಯಾಳುಗಳ ರಕ್ಷಣೆಗೆ ಭದ್ರತಾ ಪಡೆಗಳು ಸೋಮವಾರ ನಡೆ ಸಿದ  ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.  ಈ ಮಧ್ಯೆ, ಈ ಹತ್ಯಾಕಾಂಡ ದಲ್ಲಿ ಅಸುನೀಗಿದವರ  ಸಂಖ್ಯೆ 69ಕ್ಕೆ ಏರಿದೆ.

‘ಕಾರ್ಯಾಚರಣೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ದು, ಬೆರಳೆಣಿಕೆಯಷ್ಟು ಜನರು ಮಾತ್ರ ಉಗ್ರರ ಒತ್ತೆಯಲ್ಲಿ ದ್ದಾರೆ’ ಎಂದು ಕೀನ್ಯಾದ ಆಂತರಿಕ ವ್ಯವಹಾರಗಳ ಸಚಿವ ಜೋಸೆಫ್‌ ಒಲೆ ಲೆಂಕು ಹೇಳಿದ್ದಾರೆ.

ಭದ್ರತಾ ಪಡೆಯು ಶಾಂಪಿಂಗ್‌ ಮಾಲ್‌ ಸಂಕೀರ್ಣವನ್ನು ಸುತ್ತುವರಿ ದಿದ್ದು, ಉಗ್ರರ ವಿರುದ್ಧ ಮುಗಿಬಿದ್ದಿ ದ್ದಾರೆ. ಗುಂಡಿನ ಚಕಮಕಿ ಸಂದರ್ಭ ದಲ್ಲಿ ನಾಲ್ಕು ಪ್ರಬಲ ಸ್ಫೋಟಗಳು ಮತ್ತು ಕೆಲವು ಸಾರಿ ಫಿರಂಗಿಯ ಮೊರೆತ ಕೇಳಿಬಂದಿದೆ. ದಟ್ಟ ಹೊಗೆ ಕಾಣಿಸಿಕೊಂಡಿತು. ಸುಮಾರು 90 ನಿಮಿಷದ ವರೆಗೂ ಬೆಂಕಿ ಹೊತ್ತಿ ಉರಿಯಿತು ಎಂದು ಘಟನಾ ಸ್ಥಳದಲ್ಲಿದ್ದ ಸುದ್ದಿಗಾರರು ವರದಿ ಮಾಡಿದ್ದಾರೆ.

ಮಾಲ್‌ನ ಬಹುತೇಕ ಭಾಗಗಳನ್ನು ಕೀನ್ಯಾ ಸೇನಾ ಪಡೆ ತನ್ನ ವಶಕ್ಕೆ ತೆಗೆದು ಕೊಂಡಿದೆ. ಅಲ್‌ಖೈದಾ ಸಂಘಟನೆಯ ನಂಟು ಹೊಂದಿರುವ   ಬಂಡುಕೋರರ ವಿರುದ್ಧದ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.
‘ನಮ್ಮ ಉದ್ದೇಶ ಒತ್ತೆಯಾಳುಗಳ ಜೀವ ರಕ್ಷಣೆ. ಆದ್ದರಿಂದ ಈ ಕಾರ್ಯಾ ಚರಣೆ ವಿಳಂಬ ಆಗುತ್ತಿದೆ’ ಎಂದು ಕೀನ್ಯಾದ ರಕ್ಷಣಾ ಪಡೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

‘ಹೇಯ ಕೃತ್ಯ ಎಸಗಿರುವ ಆ ರಾಕ್ಷಸ ರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಶೀಘ್ರದಲ್ಲೇ ಅವರಿಗೆ ತಕ್ಕ ಶಾಸ್ತಿ ಕಾದಿದೆ’ ಎಂದು ಕೀನ್ಯಾ ಅಧ್ಯಕ್ಷ ಉಹುರು ಕೆನ್ಯಾಟ  ಹೇಳಿದ್ದಾರೆ. ಬಂಡು ಕೋರರ ದಾಳಿಯಲ್ಲಿ ಅಧ್ಯಕ್ಷರ ಸೋದರ ಸಂಬಂಧಿ ಮತ್ತು ಅವರ ಪ್ರಿಯತಮೆ ಸಾವನ್ನಪ್ಪಿದ್ದಾರೆ.

ಕೀನ್ಯಾದ ಸೇನಾ ಪಡೆಯ ಜೊತೆಗೆ ಇಸ್ರೇಲ್‌ನ ಭದ್ರತಾ ಪಡೆ, ಬ್ರಿಟಿಷ್‌ ಮತ್ತು ಅಮೆರಿಕಗಳ ಬೇಹುಗಾರಿಕಾ ಏಜೆಂಟ್‌ಗಳು ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಹೆಲಿಕಾಪ್ಟರ್‌ ಕೂಡ ಬಳಕೆ ಮಾಡಲಾಗಿದೆ.

ಕಾರ್ಯಾಚರಣೆ ಮುಂದುವರಿಸಿದರೆ ಅದು ಒತ್ತೆಯಾಳುಗಳ ಜೀವಕ್ಕೆ ಕಂಟಕ ತರುತ್ತದೆ’ ಎಂದು ಅಲ್‌ ಶಬಾಬ್‌ ಸಂಘಟನೆಯ ವಕ್ತಾರ ಅಲಿ ಮೊಹಮುದ್‌ರಗೆ ಎಚ್ಚರಿಕೆ ನೀಡಿದ್ದಾನೆ.

‘ನಿಮ್ಮ ಸೈನಿಕರು ನಮ್ಮ ನಾಡಿನಲ್ಲಿರು ವವರೆಗೂ ಕೀನ್ಯಾದಲ್ಲಿ ಶಾಂತಿಯಿಂದ ಇರಲು ಸಾಧ್ಯವಿಲ್ಲ’ ಎಂದು ರಗೆ ಹೇಳಿದ್ದಾನೆ.
ಸೋಮಾಲಿಯಾದಲ್ಲಿ ಇಸ್ಲಾಂ ಮೂಲಭೂತವಾದಿಗಳ ವಿರುದ್ಧದ ಸಮರದಲ್ಲಿ ಆಫ್ರಿಕನ್‌ ಒಕ್ಕೂಟಕ್ಕೆ ಕೀನ್ಯಾ ಕೂಡ ನೆರವು ನೀಡಿದೆ. ಆದ್ದರಿಂದ  ಶಬಾಬ್‌ ಬಂಡುಕೋರರು ಕೀನ್ಯಾದಲ್ಲಿ ಈ ಹತ್ಯಾಕಾಂಡ ನಡೆಸಿದ್ದಾರೆ ಎನ್ನ ಲಾಗಿದೆ. ಇಸ್ರೇಲ್‌ ಒಡೆತನದ ನಾಲ್ಕು ಅಂತಸ್ತಿನ ಈ ಮಾಲ್ ಮೇಲೆ ಉಗ್ರರು ಶನಿವಾರ ಮಧ್ಯಾಹ್ನ ದಾಳಿ ನಡೆಸಿದರು.

12  ಉಗ್ರರು ಭಾಗಿ?: ವೆಸ್ಟ್ ಗೇಟ್‌ ಶಾಪಿಂಗ್‌ ಮಾಲ್‌ನಲ್ಲಿ ಅಲ್‌ ಶಬಾಬ್‌ ಉಗ್ರರು ನಡೆಸಿರುವ ಗುಂಡಿನ ದಾಳಿಯಲ್ಲಿ ಸುಮಾರು 12 ಮಂದಿ ಭಾಗವಹಿಸಿದ್ದಾರೆಂದು ಶಂಕಿಸಲಾಗಿದೆ. ಮಾಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ ದಲ್ಲಿನ ದೃಶ್ಯಗಳ ವಿಶ್ಲೇಷಣೆಯನ್ನು ಆಧರಿಸಿ ಸುಮಾರು 12 ಉಗ್ರರು ಈ ಹತ್ಯಾಕಾಂಡ ನಡೆಸಿರಬಹುದು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ತಂಡದಲ್ಲಿ ಮಹಿಳೆಯೊಬ್ಬಳೂ ಇದ್ದಾಳೆ ಎಂದು ಹೇಳಲಾಗಿದೆ.

ಭಾರತ ಮೂಲದ ಗರ್ಭಿಣಿ ಸಾವು: (ಅಬುಜ ವರದಿ): ಭಾರತ ಮೂಲದ ಗರ್ಭಿಣಿಯೊಬ್ಬರು ಬಂಡುಕೋರರ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿ ಯಾಗಿದೆ. ಆರು ತಿಂಗಳ ಗರ್ಭಿಣಿ ಯಾಗಿದ್ದ ರುಹಿಲಾ ಆದಿತ್ಯ ಸೂದ್‌ ಅವರು ಸಾವನ್ನಪಿದ್ದು, ಉಗ್ರರು ದಾಳಿ ನಡೆಸಿದ ಸಮಯದಲ್ಲಿ ಅವರು ಮಾಲ್‌ನ ಮೇಲ್ಛಾವಣಿಯಲ್ಲಿದ್ದರು.

ಭಾರತೀಯನಿಗೆ ಗುಂಡೇಟು: ಇಸ್ಲಾಂ ಕುರಿತು ಪ್ರಶ್ನೆಗೆ ಉತ್ತರಿಸದ ಕಾರಣ ಭಾರತ ಮೂಲದ ವ್ಯಕ್ತಿ ಮೇಲೆ ಉಗ್ರರು ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಅಮೆರಿಕ ಖಂಡನೆ (ವಾಷಿಂಗ್ಟನ್; ಪಿಟಿಐ ವರದಿ): ನೈರೋಬಿ ಯಲ್ಲಿ ಉಗ್ರರು ನಡೆಸಿರುವ ಕೃತ್ಯ ವನ್ನು ಅಮೆರಿಕ  ಖಂಡಿಸಿದೆ.
ಅಮೆರಿಕ ಅಧ್ಯಕ್ಷ ಒಬಾಮ ಅವರು ಕೀನ್ಯಾ ಅಧ್ಯಕ್ಷ ರೊಂದಿಗೆ ದೂರವಾಣಿ ಯಲ್ಲಿ ಮಾತನಾಡಿದ್ದು, ದುರುಳರನ್ನು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಗುರಿಪಡಿಸು ವಂತೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕ ಎಲ್ಲ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.