ADVERTISEMENT

ಕೋಸ್ಟಾ ಕಾನ್‌ಕಾರ್ಡಿಯಾ ದುರಂತ: 201 ಭಾರತೀಯ ಸಿಬ್ಬಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ರೋಮ್, (ಪಿಟಿಐ): ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತಕ್ಕೀಡಾದ `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗಿನಿಂದ 201 ಭಾರತೀಯ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು,ಇನ್ನೊಬ್ಬ ಭಾರತೀಯನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದ ಭಾರತೀಯ ರೆಬೆಲ್ಲೊ ರಸೆಲ್ ಟೆರೆನ್‌ಗಾಗಿ ತೀವ್ರ ಶೋಧ ಮುಂದುವರಿಯುತ್ತಿದೆಯಲ್ಲದೆ ಭಾರತೀಯ ಸಿಬ್ಬಂದಿ ಕುರಿತು ಮಾಹಿತಿಗಾಗಿ ನವದೆಹಲಿ ಮತ್ತು ರೋಮ್‌ಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ. ದುರಂತದಲ್ಲಿ ಇದುವರೆಗೆ ಭಾರತೀಯರು ಸಾವಿಗೀಡಾದ ವರದಿಯಾಗಿಲ್ಲ.

ರಸೆಲ್ ಅವರು `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗಿನಲ್ಲಿ ವೆಯಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹಡಗಿನಲ್ಲಿ ಒಟ್ಟು 203 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ 202 ಹಡಗಿನ ಸಿಬ್ಬಂದಿಯಾಗಿದ್ದು, ಇನ್ನೊಬ್ಬರು ಪ್ರಯಾಣಿಕರಾಗಿದ್ದರು ಎಂದು ಭಾರತೀಯ ರಾಯಭಾರ ಕಚೇರಿಯ ವಕ್ತಾರ ವಿಶ್ವೇಶ್ ನೇಗಿ ತಿಳಿಸಿದ್ದಾರೆ.
ಗಿಗ್ಲಿಯೊ ದ್ವೀಪ ಬಳಿ ಶನಿವಾರ ಹಡಗು ಬಂಡೆಗೆ ಅಪ್ಪಳಿಸಿದ್ದರಿಂದ ದುರಂತ ಸಂಭವಿಸಿತ್ತು. ದುರಂತದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ.

`ಹಡಗಿನ ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೋ ನೀಡಿದ ತಪ್ಪು ಮಾಹಿತಿಯಿಂದಾಗಿ ರಕ್ಷಣಾ ಕಾರ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಯಿತು~ ಎಂದು ಹಡಗಿನ ಮಾಲೀಕ ದೂರಿದ್ದಾರೆ.

ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ಅವರು ಬಳಸಲಿಲ್ಲ ಮಾತ್ರವಲ್ಲ, ಹಡಗು ಸಂಚಾರಕ್ಕೆ ಬಳಸಿದ ಮಾರ್ಗವೂ ಸರಿಯಾಗಿರಲಿಲ್ಲ ಎಂದೂ ಅವರು ಇದೇ ವೇಳೆ ಆರೋಪಿಸಿದರು. ಇಟಲಿ, ಅಮೆರಿಕ ಮತ್ತು ಫ್ರಾನ್ಸ್‌ಗೆ ಸೇರಿದ ಸಿಬ್ಬಂದಿ ಕೂಡ ದುರಂತದಲ್ಲಿ ಕಾಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.