ADVERTISEMENT

ಕ್ಯಾಟಲೋನಿಯಾ ಸ್ವತಂತ್ರರಾಷ್ಟ್ರ ಬಿಕ್ಕಟ್ಟು ಉಲ್ಬಣ

ಏಜೆನ್ಸೀಸ್
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಕ್ಯಾಟಲೋನಿಯಾ ಅಧ್ಯಕ್ಷ ಕಾರ್ಲೆಸ್ ಪುಗ್ಡೆಮಂಟ್ ಅವರು ಜನಮತಗಣನೆಯನ್ನು ಘೋಷಿಸುವ ಪತ್ರಕ್ಕೆ ಸಹಿ ಹಾಕಿದರು – ಎಎಫ್‌ಪಿ ಚಿತ್ರ
ಕ್ಯಾಟಲೋನಿಯಾ ಅಧ್ಯಕ್ಷ ಕಾರ್ಲೆಸ್ ಪುಗ್ಡೆಮಂಟ್ ಅವರು ಜನಮತಗಣನೆಯನ್ನು ಘೋಷಿಸುವ ಪತ್ರಕ್ಕೆ ಸಹಿ ಹಾಕಿದರು – ಎಎಫ್‌ಪಿ ಚಿತ್ರ   

ಮ್ಯಾಡ್ರಿಡ್: ಕ್ಯಾಟಲೋನಿಯಾ ಸ್ವತಂತ್ರ ದೇಶ ಬಿಕ್ಕಟ್ಟು ಪರಿಹಾರಕ್ಕೆ ಎಲ್ಲ ಮಾರ್ಗಗಳನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದೆ  ಎಂದು ಸ್ಪೇನ್ ಪ್ರಧಾನಿ ಮರಿಯಾನೊ ರಜೊಯ್ ಅವರು ಬುಧವಾರ ಹೇಳಿದ್ದಾರೆ.

ಸ್ಪೇನ್ ದೇಶದಿಂದ ಹೊರಬಂದು ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಜನಾದೇಶವನ್ನು ಕ್ಯಾಟಲೋನಿಯಾ ಅಧ್ಯಕ್ಷ ಕಾರ್ಲೆಸ್ ಪುಗ್ಡೆಮಂಟ್ ಅವರು ಒಪ್ಪಿಕೊಂಡು, ಘೋಷಣಾ ಪತ್ರಕ್ಕೆ ಮಂಗಳವಾರ ಸಹಿ ಹಾಕಿದ್ದರು.

ಆದರೆ ಸ್ವಲ್ಪ ಹೊತ್ತಿನಲ್ಲೇ ಕಾರ್ಲೆಸ್ ಅವರು ತಮ್ಮ ಸಂಸದೀಯ ಭಾಷಣದಲ್ಲಿ, ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಅನುವಾಗುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ವತಂತ್ರ ರಾಷ್ಟ್ರ ಘೋಷಣೆಯನ್ನು ಅಮಾನತಿನಲ್ಲಿಡುವ ಘೋಷಣೆ ಮಾಡಿದರು. ಇದು ಅವರ ಬೆಂಬಲಿಗರನ್ನು ಗೊಂದಲಕ್ಕೆ ತಳ್ಳಿದ್ದು, ಸ್ಪೇನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ.

ADVERTISEMENT

ಬುಧವಾರ ತುರ್ತು ಸಂಪುಟ ಸಭೆ ನಡೆಸಿದ ಸ್ಪೇನ್ ಪ್ರಧಾನಿ ಮರಿಯಾನೊ ರಜೊಯ್ ಅವರು, ಕ್ಯಾಟಲೋನಿಯಾ ಸ್ವತಂತ್ರ ದೇಶವಾಗುವುದನ್ನು ತಡೆಯಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಅರೆ ಸ್ವಾಯತ್ತ ಪ್ರದೇಶವಾಗಿರುವ ಕ್ಯಾಟಲೋನಿಯಾ ಮೇಲೆ ನೇರ ಆಡಳಿತ ಹೇರಲು ಅವರು ನಿರಾಕರಿಸಿದ್ದಾರೆ. ಇದು ಜನರಲ್ಲಿ ಗೊಂದಲ ಮೂಡಿಸಿದೆ.

ಕೇಂದ್ರ ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಎಲ್ಲ ದಾರಿಗಳು ಮುಕ್ತವಾಗಿದ್ದು, ಬಿಕ್ಕಟ್ಟು ಪರಿಹಾರ ಕುರಿತ ಮಾತುಕತೆ ಪ್ರಗತಿಯಲ್ಲಿವೆ ಎಂದಿದ್ದಾರೆ.

ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಇಲ್ಲಿ ಜನಮತಗಣನೆ ನಡೆಸಲಾಗಿತ್ತು. ಶೇ 90ರಷ್ಟು ಮಂದಿ ಸ್ವತಂತ್ರ ರಾಷ್ಟ್ರವನ್ನು ಬೆಂಬಲಿಸಿದ್ದರು. 75 ಲಕ್ಷ ಜನಸಂಖ್ಯೆಯ ಆರ್ಥಿಕವಾಗಿ ಶಕ್ತಿಯುತವೆನಿಸಿರುವ ಕ್ಯಾಟಲೋನಿಯಾವು ಸ್ವತಂತ್ರ ದೇಶವಾಗುವ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿದೆ.

ಮಂಗಳವಾರ ರಾತ್ರಿ ಸಾವಿರಾರು ಜನರು ಬಾರ್ಸಿಲೋನಾದ ಸಂಸತ್ ಭವನದ ಮುಂದೆ ಜಮಾಯಿಸಿ, ಕ್ಯಾಟಲೋನಿಯಾ ಸ್ವತಂತ್ರ ರಾಷ್ಟ್ರದ ಪರ ಘೋಷಣೆ ಕೂಗಿದ್ದರು.

ಕ್ಯಾಟಲೋನಿಯಾ ನಾಯಕರು ಸ್ವತಂತ್ರ ರಾಷ್ಟ್ರ ಘೋಷಣೆಯನ್ನು ಕೈಬಿಡದ ಹೊರತು ಮಾತುಕತೆ ಸಾಧ್ಯವಿಲ್ಲ ಎಂಬ ನಿಲುವಿಗೆ ಸರ್ಕಾರ ಅಂಟಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.