ಲಂಡನ್ (ಪಿಟಿಐ): ಮಾನವ ದೇಹದ ಮೇಲೆ ಪದೇ ಪದೇ ದಾಳಿ ಮಾಡಿ ಸೋಂಕಿಗೆ ಕಾರಣವಾಗುವ ವೈರಾಣುಗಳನ್ನೇ ಮಾರಕ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಅಸ್ತ್ರಗಳನ್ನಾಗಿ ಬಳಸುವ ಹೊಸ ದಾರಿಯೊಂದನ್ನು ವೈದ್ಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
`ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು~ ಎಂಬಂತೆ ಅಮೆರಿಕದ ಸಂಶೋಧಕರ ತಂಡ ಮಾರಕ ಕ್ಯಾನ್ಸರ್ ಜೀವಕೋಶಗಳನ್ನು ನಾಶಗೊಳಿಸಬಲ್ಲ ವಿಶೇಷ ಸಾಮರ್ಥ್ಯವುಳ್ಳ ವೈರಾಣುಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ಮಾನವ ದೇಹದೊಳಗೆ ಬಿಡುವ ವೈರಾಣುಗಳಿಂದ ಆರೋಗ್ಯವಂತ ಜೀವಕೋಶಗಳಿಗೆ ಹಾನಿಯಾಗುವ ಅಪಾಯ ಹೆಚ್ಚು. ಹೀಗಾಗದಂತೆ ಎಚ್ಚರವಹಿಸಲು ದುರ್ಬಲವಾಗಿರುವ ವೈರಾಣುಗಳನ್ನು ರೋಗಿಯ ದೇಹದೊಳಗೆ ಬಿಡಲಾಗುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ.
ಒಟ್ಟಾರೆ ಈ ಬೆಳವಣಿಗೆ ವೈದ್ಯಕೀಯ ಕ್ಷೇತ್ರ ಮತ್ತು ಕ್ಯಾನ್ಸರ್ ರೋಗಿಗಳ ಬಾಳಲ್ಲಿ ಹೊಸ ಆಶಾ ಕಿರಣವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.
ಹೃದಯರೋಗ ಪತ್ತೆಗೆ ರಕ್ತ ಪರೀಕ್ಷೆ
ಲಂಡನ್ (ಪಿಟಿಐ): ಹೃದಯಾಘಾತವಾಗುವ ಎರಡು ಅಥವಾ ಮೂರು ವಾರಗಳ ಮೊದಲು ಅದರ ಲಕ್ಷಣಗಳನ್ನು ಪತ್ತೆ ಮಾಡುವ ಸರಳ ಹಾಗೂ ಕಡಿಮೆ ವೆಚ್ಚದ ರಕ್ತ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
5,000 ರೂಪಾಯಿ ವೆಚ್ಚದ ಈ ಪರೀಕ್ಷೆಯು ಮುಂದಿನ ವರ್ಷದ ಹೊತ್ತಿಗೆ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಕ್ಯಾಲಿಫೊರ್ನಿಯಾ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.