ADVERTISEMENT

ಖತಾರ್: ವಿಶ್ವದ ಅತ್ಯಂತ ಸಿರಿವಂತ ದೇಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 10:15 IST
Last Updated 26 ಫೆಬ್ರುವರಿ 2012, 10:15 IST
ಖತಾರ್: ವಿಶ್ವದ ಅತ್ಯಂತ ಸಿರಿವಂತ ದೇಶ
ಖತಾರ್: ವಿಶ್ವದ ಅತ್ಯಂತ ಸಿರಿವಂತ ದೇಶ   

ದುಬೈ (ಪಿಟಿಐ): ಜಗತ್ತಿನ ಅತ್ಯಂತ ಸಿರಿವಂತ ದೇಶ ಖತಾರ್ ಎಂಬುದಾಗಿ ಅಮೆರಿಕದ ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿದೆ. ಶ್ರೀಮಂತ ರಾಷ್ಟ್ರಗಳ ಹೊಸ ಪಟ್ಟಿಯನ್ನು ನಿಯತಕಾಲಿಕ ಭಾನುವಾರ ಪ್ರಕಟಿಸಿದೆ.

17 ಲಕ್ಷ ಜನಸಂಖ್ಯೆಯುಳ್ಳ ಈ ಕೊಲ್ಲಿ ರಾಷ್ಟ್ರವು ತಲಾ ಆದಾಯದ ಲೆಕ್ಕಾಚಾರದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ ಎಂದು ನಿಯತಕಾಲಿಕ ತಿಳಿಸಿದೆ. ತೈಲ ಬೆಲೆ ಏರಿಕೆ ಮತ್ತು ಈ ರಾಷ್ಟ್ರವು ಹೊಂದಿರುವ ವ್ಯಾಪಕ ನೈಸರ್ಗಿಕ ಅನಿಲ ನಿಕ್ಷೇಪ ಈ ರಾಷ್ಟ್ರದ ಶ್ರೀಮಂತಿಕೆಗೆ ಕಾರಣವಾಗಿದೆ.

ಖತಾರ್ ನ ತಲಾ ಆದಾಯ 2010ರಲ್ಲಿ 88,000 ಅಮೆರಿಕನ್ ಡಾಲರ್ ಗಳು ಎಂದು ನಿಯತಕಾಲಿಕ ತಿಳಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಟ್ (ಯುಎಇ) ತಲಾ ಆದಾಯ 47,500 ಅಮೆರಿಕನ್ ಡಾಲರ್ ಗಳು. ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಕ್ಕೆ ದೊರೆತಿರುವ ಸ್ಥಾನ 6ನೇಯದು. ಕುವೈತ್ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದೆ.

2022ರ ಫುಟ್ಬ್ಬಾಲ್ ವಿಶ್ವಕಪ್ ಪಂದ್ಯಾಟದ ಅತಿಥೇಯ ರಾಷ್ಟ್ರವಾಗಿರುವ ಖತಾರ್ 2020ರ ಒಲಿಂಪಿಕ್ ಕ್ರೀಡಾಕೂಟ ಸಂಘಟಿಸುವತ್ತಲೂ ದಾಪುಗಾಲಿಟ್ಟಿದೆ.

ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಖತಾರ್ ಸರ್ಕಾರ ಮೂಲಸವಲತ್ತು ವೃದ್ಧಿಗೆ ಅಪಾರ ಹಣ ಸುರಿಯುತ್ತಿದೆ. ಆಳ ಸಮುದ್ರ ಬಂದರು, ವಿಮಾನ ನಿಲ್ದಾಣ ಮತ್ತು ರೈಲ್ವೇ ಜಾಲ ವಿಸ್ತರಣೆಗೆ ಸರ್ಕಾರ ತೀವ್ರ ಗಮನ ಹರಿಸಿದೆ.

ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಲಕ್ಸೆಂಬರ್ಗ್ ದ್ವಿತೀಯ ಸ್ಥಾನ ಪಡೆದಿದೆ. ಇದರ ತಲಾ ಆದಾಯ 81,000 ಅಮೆರಿಕನ್ ಡಾಲರುಗಳು.

ತಂತ್ರಜ್ಞಾನದಲ್ಲಿ ಮುಂದಿರುವ ಸಿಂಗಪುರ ಮೂರನೇ ಸ್ಥಾನದಲ್ಲಿದೆ. ಸಿಂಗಪುರದ ತಲಾ ಆದಾಯ 56,700 ಅಮೆರಿಕನ್ ಡಾಲರುಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.