ADVERTISEMENT

ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸಮ್ಮತಿ

14 ವರ್ಷಗಳ ನಂತರ ಭಾರತ–ಪಾಕ್‌ ಡಿಜಿಎಂಒಗಳ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ವಾಘಾ (ಪಾಕಿಸ್ತಾನ) (ಪಿಟಿಐ, ಐಎಎನ್‌ಎಸ್‌): ಭಾರತ– ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಲು ಉಭಯ ದೇಶಗಳ ಉನ್ನತ ಸೇನಾ­ಧಿಕಾರಿ­ಗಳು ಸಮ್ಮತಿಸಿದ್ದಾರೆ. ಸುಮಾರು 14 ವರ್ಷಗಳ ನಂತರ ಭಾರತ ಹಾಗೂ ಪಾಕಿಸ್ತಾನ ಸೇನಾ ಕಾರ್ಯಾ­ಚರಣೆಯ ಮಹಾ ನಿರ್ದೇಶ­ಕರು (ಡಿಜಿಎಂಒ)  ಮಂಗಳವಾರ ಮುಖಾಮುಖಿಯಾಗಿ ಸಮಾಲೋಚನೆ ನಡೆಸಿದರು.

ಗಡಿಯಲ್ಲಿ ಕದನವಿರಾಮ ಉಲ್ಲಂಘನೆ­ಯಾಗದಂತೆ ಈಗ ಅನು­ಸರಿಸ­ಲಾಗುತ್ತಿರುವ ವಿಧಾನಗಳಿಗೆ ‘ಶಕ್ತಿ ತುಂಬುವ’ ಕಾರ್ಯಕ್ಕೆ ಉಭಯ ದೇಶ­ಗಳು ಈ ವೇಳೆ ನಿರ್ಧಾರಕ್ಕೆ ಬಂದವು. ಡಿಜಿಎಂ­ಒಗಳಾದ  ಪಾಕ್‌ನ ಮೇಜರ್‌ ಜನರಲ್‌ ಅಮೀರ್‌ ರಿಯಾಜ್‌ ಹಾಗೂ ಭಾರತದ  ಲೆಫ್ಟಿ­ನೆಂಟ್‌ ಜನರಲ್‌ ವಿನೋದ್‌ ಭಾಟಿಯಾ ಅವರುಗಳು ವಾಘಾದ ಅಟ್ಟಾರಿ ಗಡಿ­ಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಉಭಯ ರಾಷ್ಟ್ರ­ಗಳ ಇನ್ನೂ ಕೆಲ ಪ್ರಮುಖ ಸೇನಾ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.

‘ಫಲಪ್ರದ, ರಚನಾತ್ಮಕ ಭೇಟಿ ಇದಾ­ಗಿತ್ತು, ಗಡಿ ನಿಯಂತ್ರಣ ರೇಖೆಗುಂಟ ಕದನವಿರಾಮ ಉಲ್ಲಂಘನೆ ಯಾಗುತ್ತಿ­ರುವ ಬಗ್ಗೆ ಹಾಗೂ ಈ ಸಂಬಂಧ ಸದ್ಯ ಅನುಸರಿಸಲಾಗುತ್ತಿರುವ ವಿಧಾನಗಳ ಕುರಿತು ಚರ್ಚೆ ನಡೆಸಲಾಯಿತು’ ಎಂದು ವಿನೋದ್‌ ಭಾಟಿಯಾ ತಿಳಿಸಿದರು. ಸಾಮಾನ್ಯವಾಗಿ ಎರಡೂ ರಾಷ್ಟ್ರಗಳ ಡಿಜಿಎಂಒಗಳು ಪ್ರತಿ ಮಂಗಳವಾರ ಹಾಟ್‌ಲೈನ್ ಸಂಪರ್ಕದಲ್ಲಿರುತ್ತಿದ್ದು, ಇನ್ನು ಮುಂದೆ ಇಂತಹ ಮಾತುಕತೆಗಳು ಮತ್ತಷ್ಟು ಪರಿಣಾಮಕಾರಿ ಎನಿಸಬೇಕು ಎನ್ನುವ ನಿರ್ಧಾರಕ್ಕೂ ಸೇನಾಧಿ ಕಾರಿಗಳು ಬಂದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಹಾಗೂ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರುಗಳು ಸೆ. 29 ರಂದು ವಿಶ್ವಸಂಸ್ಥೆಯಲ್ಲಿ ಭೇಟಿಯಾ­ದಾಗ ಡಿಜಿಎಂಒಗಳ ಮಟ್ಟದ ಸಭೆ ನಡೆ­ಸುವ ಕುರಿತು ನಿರ್ಧಾರಕ್ಕೆ ಬಂದಿದ್ದರು. ವಿಶ್ವಸಂಸ್ಥೆಯ ಸಭೆಯಲ್ಲಿ ತೆಗೆದು ಕೊಂಡ ನಿರ್ಧಾರದ ತರುವಾಯವೂ ಕದನವಿರಾಮ ಉಲ್ಲಂಘನೆಯ ಕುರಿತು ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ಸಭೆ ನಡೆಯದಿರುವ ಕುರಿತು ಪ್ರಧಾನಿ ಸಿಂಗ್‌ ಈಚೆಗೆ ಪಾಕ್‌ ಪ್ರಧಾನಿ ಬಳಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಹಾಗಾಗಿ ಈ ಸಭೆ ನಡೆದಿದೆ ಎನ್ನ­ಲಾಗಿದೆ. ಉಭಯ ರಾಷ್ಟ್ರಗಳ ನಡುವೆ ಡಿಜಿಎಂಒ ಮಟ್ಟದ ಮಾತುಕತೆ ಕಾರ್ಗಿಲ್‌ ಕದನದ ತರುವಾಯ 1999ರ ಜುಲೈನಲ್ಲಿ ನಡೆದಿತ್ತು. ಇತ್ತೀಚೆಗೆ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗು­ತ್ತಿದ್ದು, ಕಳೆದ ಆಗಸ್‌್ಟನಲ್ಲಿ ಪಾಕ್‌  ನಡೆಸಿದ ದಾಳಿಗೆ ಐವರು ಭಾರತೀಯ ಸೈನಿಕರು ಹತರಾಗಿದ್ದರು. ಗಡಿಯಲ್ಲಿ ತ್ವೇಷಮಯ ಸ್ಥಿತಿ ತಿಳಿ­ಗೊಳಿಸುವಲ್ಲಿ ಈ ಭೇಟಿ ನೆರವಾಗುತ್ತದೆ ಎನ್ನುವ ವಿಶ್ವಾಸವನ್ನು ‘ಅಸೋಸಿಯೇಟೆಡ್‌ ಪ್ರೆಸ್‌ ಆಫ್‌ ಪಾಕಿಸ್ತಾನ’ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.