ADVERTISEMENT

ಗರ್ಭದಲ್ಲೇ ಶಿಶುಸಾವು: ದಂಪತಿಗೆ ಪರಿಹಾರ ಹಣ ನೀಡಿದ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ಲಂಡನ್ (ಪಿಟಿಐ): ಭಾರತ ಮೂಲದ ಗರ್ಭಿಣಿಗೆ ತಪ್ಪು ಔಷಧ ನೀಡಿ ಭ್ರೂಣದ ಸಾವಿಗೆ ಕಾರಣವಾದ ಇಲ್ಲಿನ ಆಸ್ಪತ್ರೆಯೊಂದು ದಂಪತಿಗೆ ಪರಿಹಾರ ನೀಡಿದೆ. ಆದರೆ ಅದು ಎಷ್ಟು ಮೊತ್ತದ ಪರಿಹಾರ ನೀಡಲಾಗಿದೆ ಎನ್ನುವುದನ್ನು ಬಹಿರಂಗಗೊಳಿಸಿಲ್ಲ.

ಇಂಗ್ಲೆಂಡ್‌ನ ಕೇಂಬ್ರಿಜ್‌ಶೈರ್ ಪ್ರಾಂತ್ಯದ ಹನ್‌ಟಿಂಗ್‌ಡಾನ್‌ನ ನಿವಾಸಿಗಳಾದ ವರುಣ್ ಮತ್ತು ಸಾರಾ ಶರ್ಮಾ ದಂಪತಿ ವೊದಲ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಸಾರಾ ಅವರಿಗೆ ತಪ್ಪಾದ ಔಷಧವನ್ನು ನೀಡಿದ ಕಾರಣ ಗರ್ಭದಲ್ಲಿದ್ದ ಶಿಶು ಸರಿಯಾಗಿ ಬೆಳೆಯದೆ ಮೃತಪಟ್ಟಿತು.

ಪೀಟರ್‌ಬರ್ಗ್‌ನ ಆಸ್ಪತ್ರೆಯ ಚರ್ಮಶಾಸ್ತ್ರ ವೈದ್ಯರು ಮೊಡವೆ ರೋಗಕ್ಕೆ ನೀಡುವ ಬಹು  ಅಪಾಯಕರಿ ಔಷಧಿ `ಐಸೊಟ್ರೆಟಿನಾಯಿನ್' ಅನ್ನು  27 ವರ್ಷದ ಸಾರಾ ಅವರಿಗೆ ನೀಡಿದ್ದರು.

ಗರ್ಭಿಣಿ ಸಾರಾ 21ನೇ ವಾರದಲ್ಲಿ  ಮೃತಪಟ್ಟಿದ್ದ  ಹೆಣ್ಣು ಶಿಶುವಿಗೆ 2012ರ ಜನವರಿಯಲ್ಲಿ ಜನ್ಮ ನೀಡಿದರು. ಇದಕ್ಕೆ ತಪ್ಪು ಔಷಧವೇ ಕಾರಣ ಎಂದು ಶಿಶುವಿನ ಶವಪರೀಕ್ಷೆಯಿಂದ ತಿಳಿದು ಬಂದಿದೆ. ಈ ಔಷಧದಿಂದ ಶಿಶುವಿಗೆ `ಫೆಟಲ್ ಐಸೊಟ್ರೆಟಿನಾಯಿನ್ ಸಿಂಡ್ರೋಮ್' ಎಂಬ ರೋಗ ತಗುಲಿ ಅದು ಸರಿಯಾಗಿ ಬೆಳವಣಿಗೆಯಾಗಿರಲಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.