ADVERTISEMENT

ಗರ್ಭಪಾತ ಕಾಯ್ದೆಗೆ ಆತುರವಿಲ್ಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಲಂಡನ್ (ಪಿಟಿಐ): ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ ಅವರ ದುರಂತದ ಸಾವಿನಿಂದ ಸ್ವದೇಶದಲ್ಲಿ ಪ್ರತಿಭಟನೆ ಹಾಗೂ ಜಾಗತಿಕ  ಆಕ್ರೋಶಕ್ಕೆ ಗುರಿಯಾಗಿರುವ ಐರ್ಲೆಂಡ್ ಸರ್ಕಾರವು, `ಗರ್ಭಪಾತಕ್ಕೆ ಅವಕಾಶ ಕೊಡುವ ಶಾಸನ ರಚನೆಯ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳಲಾಗದು~ ಎಂದು ಸ್ಪಷ್ಟಪಡಿಸಿದೆ.

`ಸವಿತಾ ಅವರ ಸಾವಿನ ಬಗ್ಗೆ ತನಿಖೆ ಕೈಗೊಂಡಿರುವ ತಜ್ಞರ ತಂಡದ ವರದಿಗಾಗಿ ಕಾಯುತ್ತಿದ್ದೇವೆ. ಆದ್ದರಿಂದ ಈ ವಿಚಾರದಲ್ಲಿ ತರಾತುರಿಯ ನಿರ್ಧಾರ ಕೈಗೊಳ್ಳುವುದಿಲ್ಲ~ ಎಂದು ಐರ್ಲೆಂಡ್ ಪ್ರಧಾನಿ ಎಂಡಾ ಕೆನಿ ಹೇಳಿದ್ದಾರೆ.

ತಜ್ಞರ ತಂಡದ ವರದಿಯು ನ. 27ರ ಹೊತ್ತಿಗೆ ಸರ್ಕಾರಕ್ಕೆ ಸಲ್ಲಿಕೆ ಆಗುವ ನಿರೀಕ್ಷೆ ಇದೆ. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಅಲ್ಲಿಯವರೆಗೆ ಯಾವುದೇ ಒತ್ತಡಕ್ಕೆ ಒಳಗಾಗಿ ಆತುರಾತುರವಾಗಿ ನಿರ್ಧಾರ ಕೈಗೊಳ್ಳುವುದಿಲ್ಲವೆಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಪ್ರಸಾರ ಸಂಸ್ಥೆ `ಆರ್‌ಟಿಇ ನ್ಯೂಸ್~ ತಿಳಿಸಿದೆ.

ನವದೆಹಲಿ ವರದಿ
: ಡಾ. ಸವಿತಾ ದುರಂತ ಸಾವಿನ ಪ್ರಕರಣದ ತನಿಖೆಯಲ್ಲಿ ಭಾರತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಐರ್ಲೆಂಡ್ ಸರ್ಕಾರ ಭರವಸೆ ನೀಡಿದೆ. ಭಾರತೀಯ ರಾಯಭಾರಿ ದೇವಶಿಶ್ ಚಕ್ರವರ್ತಿ ಅವರು ಶುಕ್ರವಾರ ಸಂಜೆ ಡಬ್ಲಿನ್‌ನಲ್ಲಿ ಐರ್ಲೆಂಡ್ ಉಪಪ್ರಧಾನಿ, ವಿದೇಶಾಂಗ ಸಚಿವ ಗಿಲ್ಮೋರ್ ಅವರನ್ನು ಭೇಟಿಯಾಗಿ, ಸಮಾಲೊಚಿಸಿದಾಗ ಈ ಭರವಸೆ ಸಿಕ್ಕಿದೆ.

ಆಮ್ನೆಸ್ಟಿ ಛೀಮಾರಿ
ಡಾ. ಸವಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಶನಿವಾರ ಐರ‌್ಲೆಂಡ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

`ಗರ್ಭಪಾತಕ್ಕೆ ಸಂಬಂಧಿಸಿದಂತೆ ತನ್ನ ನೆಲದ ಕಾನೂನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆಗೆ ಅನುಗುಣವಾಗಿ ಇರುವಂತೆ ಐರ‌್ಲೆಂಡ್ ನೋಡಿಕೊಳ್ಳಬೇಕು~ ಎಂದು ಅದು ಹೇಳಿದೆ.

`ತನ್ನ ಜೀವಕ್ಕೆ ಆಪತ್ತು ಬಂದಾಗ ಸುರಕ್ಷಿತ, ಕಾನೂನುಬದ್ಧ ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ಹಕ್ಕು~ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾಯ್ದೆ ಹೇಳುತ್ತದೆ ಎಂದು ಅದು ತನ್ನ ಹೇಳಿಕೆಯಲ್ಲಿ ಉಲ್ಲೆಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT