ADVERTISEMENT

ಗಾಜಾ ದಾಳಿಯ ಸಂತ್ರಸ್ತೆ ಫೋಟೋ ಪ್ರದರ್ಶಿಸಿ 'ಕಾಶ್ಮೀರಿ' ಎಂದ ಪಾಕಿಸ್ತಾನ ಪ್ರತಿನಿಧಿ

ಏಜೆನ್ಸೀಸ್
Published 24 ಸೆಪ್ಟೆಂಬರ್ 2017, 11:48 IST
Last Updated 24 ಸೆಪ್ಟೆಂಬರ್ 2017, 11:48 IST
ಗಾಜಾ ದಾಳಿಯ ಸಂತ್ರಸ್ತೆ ಫೋಟೋ ಪ್ರದರ್ಶಿಸಿ 'ಕಾಶ್ಮೀರಿ' ಎಂದ ಪಾಕಿಸ್ತಾನ ಪ್ರತಿನಿಧಿ
ಗಾಜಾ ದಾಳಿಯ ಸಂತ್ರಸ್ತೆ ಫೋಟೋ ಪ್ರದರ್ಶಿಸಿ 'ಕಾಶ್ಮೀರಿ' ಎಂದ ಪಾಕಿಸ್ತಾನ ಪ್ರತಿನಿಧಿ   

ನ್ಯೂಯಾರ್ಕ್‌: ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ಪ್ರಸ್ತಾಪಿಸಿದ ವಿಶ್ವಸಂಸ್ಥೆಯ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ, ಪುರಾವೆಯಾಗಿ ತೋರಿಸಿದ ಮಹಿಳೆಯ ಫೋಟೋ ಪ್ಯಾಲೆಸ್ಟೀನ್‌  ಸಂತ್ರಸ್ತೆಯದು ಎಂಬ ವಿಚಾರ ಬಹಿರಂಗಗೊಂಡಿದೆ.

ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ ಮಲೀಹಾ, ಘರ್ಷಣೆ ಸಮಯದಲ್ಲಿ ಯುವ ಕಾಶ್ಮೀರಿಗಳನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಪೆಲೆಟ್‌ ಗನ್‌ ಬಳಕೆ ಮಾಡುತ್ತಿವೆ ಎಂದು ಆರೋಪಿಸಿದ್ದರು. ಗಾಯಗೊಂಡ ಮಹಿಳೆಯ ಚಿತ್ರವನ್ನು ತೋರಿಸಿ ‘ಇದು ಭಾರತ ಪ್ರಜಾಪ್ರಭುತ್ವದ ಪ್ರತಿರೂಪ’ ಎಂದಿದ್ದರು. ಆದರೆ, ಆ ಫೋಟೋದಲ್ಲಿರುವುದು ಗಾಜಾ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೀನ್‌ ಸಂತ್ರಸ್ತೆಯದು ಎನ್ನಲಾಗಿದೆ.

ಶನಿವಾರ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ’ನಾವು ವಿಜ್ಞಾನಿಗಳು, ವಿದ್ವಾಂಸರು, ವೈದ್ಯರು, ಎಂಜಿನಿಯರ್‌ಗಳನ್ನು ಸೃಷ್ಟಿಸಿದೆವು. ನೀವು (ಪಾಕ್‌) ಲಷ್ಕರ್‌, ಜೈಷೆ, ಹಿಜ್ಬುಲ್‌, ಹಖ್ಖಾನಿಯಂತಹ ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿದಿರಿ’ ಎಂದು ಉಗ್ರವಾದವನ್ನು ಖಂಡಿಸಿದ್ದರು.

ADVERTISEMENT

ಸುಷ್ಮಾ ಸ್ವರಾಜ್‌ ಅವರ ಮಾತಿಗೆ ಪ್ರತಿಕ್ರಿಯಿಸುವ ಬರದಲ್ಲಿ ಮಹೀಲಾ, ಭಾರತ ಭಯೋತ್ಪಾಕರ ತವರು ಎಂದು ಆರೋಪಿಸುವ ಜತೆಗೆ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ್ದರು. ಪೆಲೆಟ್‌ ಗನ್ ದಾಳಿಯಿಂದ ಕಾಶ್ಮೀರಿಗಳು ಕಣ್ಣು ದೃಷ್ಟಿ ಕಳೆದುಕೊಳ್ಳುವಂತಾಗಿದೆ ಎಂದು ಸಂತ್ರಸ್ತೆಯ ಫೋಟೋ ಪ್ರದರ್ಶಿಸಿದ್ದರು.

ಆ ಫೋಟೋದಲ್ಲಿ ಕಾಣುವ ಯುವತಿ ಪ್ಯಾಲೆಸ್ಟೀನ್‌ನ ರವಾಯಿ ಅಬು ಜೊಮಾ(17) ಎಂದು ವರದಿಯಾಗಿದೆ. 2014ರಲ್ಲಿ ಗಾಜಾ ಮೇಲೆ ಇಸ್ರೇಲಿ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಆಕೆ ಗಾಯಗೊಂಡಿದ್ದಾಗ ತೆಗೆದಿದ್ದ ಚಿತ್ರ ಎನ್ನಲಾಗಿದೆ. ಹಲವು ಪ್ರಶಸ್ತಿ ‍ಪಡೆದಿರುವ ಛಾಯಾಗ್ರಾಹಕ ಹೀಡಿ ಲೆವಿನ್‌( Heidi Levine) ಆ ಚಿತ್ರ ಸೆರೆಹಿಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.