ADVERTISEMENT

ಗಿಲಾನಿ ವಿರುದ್ಧದ ನ್ಯಾಯಾಂಗ ನಿಂದನೆ: ಕೋರ್ಟ್‌ನಲ್ಲೇ ಪ್ರಶ್ನಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಉನ್ನತ ನಾಯಕತ್ವವು ನ್ಯಾಯಾಂಗದೊಂದಿಗೆ ಯಾವುದೇ ಸಂಘರ್ಷ ನಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿಯವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಲು ಮುಂದಾಗಿರುವ ಸುಪ್ರೀಂಕೋರ್ಟ್ ಕ್ರಮವನ್ನು ನ್ಯಾಯಾಲಯದಲ್ಲೇ ಪ್ರಶ್ನಿಸಲು ನಿರ್ಧರಿಸಿರುವುದಾಗಿ ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.

ಅಧ್ಯಕ್ಷ ಆಸೀಫ್ ಅಲಿ ಜರ್ದಾರಿಯವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ಮರುತನಿಖೆಗೆ ವಿಫಲವಾಗಿರುವ ಕಾರಣಕ್ಕಾಗಿ ನ್ಯಾಯಾಂಗ ನಿಂದನೆಯ ದೋಷಾರೋಪ ಹೊರಿಸಲು ಬಯಸಿರುವ ಸುಪ್ರೀಂಕೋರ್ಟ್, ಫೆಬ್ರುವರಿ 13ರಂದು ನ್ಯಾಯಪೀಠದ ಮುಂದೆ ಹಾಜರಾಗುವಂತೆ ಗಿಲಾನಿ ಅವರಿಗೆ ಸಮನ್ಸ್ ಜಾರಿಗೊಳಿಸಿರುವುದರ ವಿರುದ್ಧ ಅವರ ವಕೀಲ ಐತ್ಜಾಜ್ ಅಹ್ಸಾನ್ ಇನ್ನು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು `ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಪ್ರಕಟಿಸಿದೆ.

ಮುಂದಿನ ತಿಂಗಳು ನಡೆಯಲಿರುವ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆ ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ಈ ವಿವಾದ ಬಗೆಹರಿಸಲು ಸರ್ಕಾರ ನಿರ್ಧರಿಸಿದೆ.

ಆಡಳಿತಾರೂಢ ಪಿಪಿಪಿಯ ಉನ್ನತ ನಾಯಕತ್ವವು ನ್ಯಾಯಾಂಗದ ವಿರುದ್ಧ ಬಹಿರಂಗವಾಗಿ ಯಾವುದೇ ಟೀಕೆಗಳನ್ನು ಮಾಡದಂತೆ ತನ್ನ ಮುಖಂಡರಿಗೆ ಸೂಚಿಸಿದೆ. ಜರ್ದಾರಿಯವರು ಸಂವಿಧಾನದಡಿ ದೇಶ ಮತ್ತು ವಿದೇಶದಲ್ಲಿ ಎಲ್ಲ ಅಪರಾಧ ಪ್ರಕರಣದ ವಿಚಾರಣೆಯ್ಲ್ಲಲಿ ಶಿಕ್ಷೆಯಿಂದ ವಿನಾಯಿತಿ  ಪಡೆದಿರುವುದರಿಂದ ಈ ಪ್ರಕರಣದಲ್ಲೂ ನ್ಯಾಯಾಲಯದಲ್ಲೇ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ಪತ್ರಿಕೆ ಹೇಳಿದೆ.

ಗಿಲಾನಿಯವರಿಗೆ ಸಮನ್ಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್ ಕ್ರಮದ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯಿಸಲು ಬಯಸದ ಬಹುತೇಕ ಪಿಪಿಪಿ ನಾಯಕರು ಅನೌಪಚಾರಿಕವಾಗಿ ಮಾತನಾಡುವಾಗ, ಇದು `ಸರ್ಕಾರದ ಕತ್ತು ಹಿಸುಕುವ ಪ್ರಯತ್ನ~ ಎನ್ನುತ್ತಾರೆ.

`ವಕೀಲರ ಸಲಹೆಯಂತೆಯೇ ನಾವು ಕೋರ್ಟ್ ಆದೇಶದ ಪುನರ್‌ಪರಿಶೀಲನೆಗೆ ಮನವಿ ಸಲ್ಲಿಸುವುದೇ ಸೂಕ್ತ. ಸಂವಿಧಾನದ 18ನೇ ತಿದ್ದುಪಡಿ ನಂತರ 10ಎ ವಿಧಿಯಡಿ ಪ್ರತಿಯೊಬ್ಬ ನಾಗರಿಕನೂ ನ್ಯಾಯಸಮ್ಮತ ವಿಚಾರಣೆಗಾಗಿ ಅರ್ಜಿ ಸಲ್ಲಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ ಎಂದು ಅವರು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.