ADVERTISEMENT

ಗುಂಡಿನ ದಾಳಿ: 12 ಸಾವು

ನೌಕಾಪಡೆ ಹಡಗುಕಟ್ಟೆಯಲ್ಲಿ ಬಂದೂಕುಧಾರಿಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:53 IST
Last Updated 16 ಸೆಪ್ಟೆಂಬರ್ 2013, 19:53 IST

ವಾಷಿಂಗ್ಟನ್‌ (ಎಎಫ್‌ಪಿ): ಇಲ್ಲಿಯ ನೌಕಾಪಡೆಗೆ ಸೇರಿದ ಬಿಗಿ ಭದ್ರತೆಯ  ಹಡಗುಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ 8.20ರ ಹೊತ್ತಿಗೆ (ಭಾರತೀಯ ಕಾಲ­ಮಾನ ಸಂಜೆ 6.30) ಮೂವರು  ಅಪ­ರಿ­ಚಿತ ಬಂದೂಕುಧಾರಿಗಳು ಮನ­ಬಂದಂತೆ ಗುಂಡು ಹಾರಿಸಿದ ಕಾರಣ ಇಬ್ಬರು ಭದ್ರತಾ ಸಿಬ್ಬಂದಿ ಸೇರಿ ಕನಿಷ್ಠ 12 ಮಂದಿ ಸತ್ತಿದ್ದಾರೆ.

ದುಷ್ಕೃತ್ಯಕ್ಕೆ ಕಾರಣರಾದ ಬಂದೂಕುಧಾರಿಯೊಬ್ಬನನ್ನು ಗುಂಡಿಟ್ಟು ಕೊಲ್ಲಲಾಗಿದೆ. ಪರಾರಿ­ಯಾಗಿರುವ ಇಬ್ಬರಿಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದು ಘಟನೆ­ಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳವು ಶ್ವೇತ­ಭವನದಿಂದ ಐದು ಕಿಮೀಗೂ ಕಡಿಮೆ ದೂರದಲ್ಲಿದ್ದು ದುಷ್ಕರ್ಮಿಗಳು ಮಿಲಿ­ಟರಿ ಪಡೆಯವರು ಧರಿಸುವ ರೀತಿಯ ಸಮವಸ್ತ್ರ ಧರಿಸಿದ್ದರು ಎನ್ನಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್‌ ಮುಖ್ಯಸ್ಥೆ ಕ್ಯಾಥಿ  ಲಾನಿಯರ್‌ ಅವರು, ಬಂದೂಕು­ಧಾರಿ­ಯೊಬ್ಬ ಸಾವಿಗೀಡಾ­ಗಿದ್ದಾನೆ. ಒಬ್ಬ ಕಪ್ಪು ವರ್ಣೀಯ, ಮತ್ತೊಬ್ಬ ಬಿಳಿ ವರ್ಣೀಯನಿಗಾಗಿ ಹುಡುಕಾಟ ನಡೆಸಲಾಗಿದೆ. ದಾಳಿಯ ಉದ್ದೇಶ ಏನೆಂದು ಗೊತ್ತಾಗಿಲ್ಲ ಎಂದಿದ್ದಾರೆ.

‘ಈ ಇಬ್ಬರು ಆದಿವಾಸಿಗಳೇ ಅಥವಾ ಮಿಲಿಟರಿ ಸಿಬ್ಬಂದಿಯೇ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಅವರು ಮಿಲಿಟರಿ ಶೈಲಿಯ ಸಮವಸ್ತ್ರ ಧರಿಸಿದ್ದರು ಎಂದಷ್ಟೆ ತಿಳಿದು ಬಂದಿದೆ’ ಎಂದು ತಿಳಿಸಿದ್ದಾರೆ.

ಹತ್ಯೆಗೀಡಾದ ಬಂದೂಕು­ಧಾರಿಯು (50) ಈ ಹಿಂದೆ ನೌಕಪಡೆಯ ನೌಕರನಾಗಿದ್ದು ಆತನ ಉದ್ಯೋಗದ ಸ್ಥಾನಮಾನ ‘ಇತ್ತೀಚೆ­ಗಷ್ಟೆ ಬದಲಾ­ಗಿತ್ತು’ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ.

ದಾಳಿ ಬಳಿಕ ನೌಕಾ ಪಡೆಯ ಪ್ರಧಾನ ಹಡಗುಕಟ್ಟೆಯನ್ನು  ನೂರಾರು ಪೊಲೀಸರು ಮತ್ತು ನೌಕಾ­ಪಡೆಯ ಸಿಬ್ಬಂದಿ ಸುತ್ತುವರಿದ್ದಾರೆ. ಅಮೆರಿಕ ನೌಕಾಪಡೆಗೆ ಅಗತ್ಯವಿರುವ ಹಡಗು, ಜಲಾಂತರ್ಗಾಮಿಗಳ ಖರೀದಿ, ನಿರ್ಮಾಣ, ನಿರ್ವಹಣೆ ಕಾರ್ಯಗಳ ಉಸ್ತುವಾರಿ ಇಲ್ಲಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.