ವಾಷಿಂಗ್ಟನ್ (ಐಎಎನ್‌ಎಸ್): ವಿಸ್ಕಾನ್ಸಿನ್ ಗುರುದ್ವಾರದ ಮೇಲೆ ದಾಳಿ ನಡೆದು ಮೂರು ದಿನಗಳ ನಂತರ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರ ವಾಣಿ ಕರೆ ಮಾಡಿ ಸಂತಾಪ ವ್ಯಕ್ತ ಪಡಿಸಿರುವ ಅಧ್ಯಕ್ಷ ಬರಾಕ್ ಒಬಾಮ, ಈ ಘಟನೆಯನ್ನು ಅಮೆರಿಕದ ಎಲ್ಲರೂ ಖಂಡಿಸುತ್ತಾರೆ ಎಂದು ಹೇಳಿದ್ದಾರೆ.
ಸಿಖ್ ಸಮುದಾಯ ಅಮೆರಿಕದ ಅವಿಭಾಜ್ಯ ಅಂಗ ಇದ್ದಂತೆ. ಅಲ್ಲದೇ ಅವರ ಪ್ರಾರ್ಥನಾ ಸ್ಥಳದ ಮೇಲೆ ದಾಳಿ ನಡೆಸಿ ಜನರನ್ನು ಕೊಂದಿರುವುದು ಮತ್ತಷ್ಟು ವಿಷಾದ ಕರವಾದ ಸಂಗತಿ ಎಂದು ಒಬಾಮ ಅವರು ಸಿಂಗ್‌ಗೆ ಹೇಳಿದ್ದಾರೆ.
ಈ ಘಟನೆ ಸಂಭವಿಸಿದ ನಂತರ ಅಮೆರಿಕ ಸರ್ಕಾರ ಹಾಗೂ ಜನರು ಕಳುಹಿಸಿದ ಸಂದೇಶಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಪ್ರಧಾನಿ, ದುಷ್ಕರ್ಮಿ ಯನ್ನು ಮಣಿಸಿದ ಸ್ಥಳೀಯ ಪೊಲೀಸರಿಗೂ ಧನ್ಯವಾದ ಹೇಳಿದ್ದಾರೆ.
ವ್ಯಕ್ತಿಗಳ ಧಾರ್ಮಿಕ ಹಕ್ಕು ಕಾಪಾಡಲು ಉಭಯ ರಾಷ್ಟ್ರಗಳು ಬದ್ಧ ವಾಗಿವೆ ಎಂದು ಸಿಂಗ್ ಹಾಗೂ ಒಬಾಮ ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಬಾದಲ್ ಭೇಟಿ : ಕಳೆದ ವಾರ ವಿಸ್ಕಾನ್ಸಿನ್ ಗುರುದ್ವಾರದ ಹಂತಕ ಪೇಜ್‌ನ ಗುಂಡಿಗೆ ಬಲಿಯಾದ ಸಿಖ್ಖರ ಕುಟುಂಬದ ಸದಸ್ಯರು ಹಾಗೂ ಗಾಯಾಳುಗಳನ್ನು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಭೇಟಿ ಮಾಡಿ ಸಂತೈಸಿದರು.
ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮ್ಮ ಕೆಲ ಸಂಪುಟ ಸಹೋದ್ಯೋಗಿಗಳೊಂದಿಗೆ ಅಮೆರಿಕಕ್ಕೆ ಆಗಮಿಸಿರುವ ಬಾದಲ್, ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಅಮೆರಿಕದಲ್ಲಿರುವ ಸಿಖ್ಖರಿಗೆ ಕರೆ ನೀಡಿದರು.
ಒಬ್ಬಂಟಿಯ ಕೃತ್ಯ: ಆರು ಜನ ಸಿಖ್ಖರನ್ನು ಬಲಿ ತೆಗೆದುಕೊಂಡ ಗುರುದ್ವಾರದ ಮೇಲಿನ ದಾಳಿ ಒಬ್ಬಂಟಿ ಕೃತ್ಯ. ಈ ದಾಳಿಯಲ್ಲಿ ವೇಡ್ ಮೈಕೇಲ್ ಪೇಜ್ ಹೊರತಾಗಿ ಮತ್ಯಾರು ಭಾಗಿಯಾಗಿಲ್ಲ ಎಂದು ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗುಂಡಿನ ದಾಳಿಯ ನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಪೇಜ್ ಗಾಯಗೊಂಡಿದ್ದ. ಆನಂತರ ಸ್ವತಃ ತಾನೇ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ ಎಂಬುದು ವಿಡಿಯೋ ದೃಶ್ಯಾವಳಿಯಿಂದ ದೃಢಪಟ್ಟಿದೆ ಎಂದೂ ತನಿಖಾ ಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.