ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ
ವಾಷಿಂಗ್ಟನ್ (ಪಿಟಿಐ/ಐಎಎನ್‌ಎಸ್): ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಅಮೆರಿಕದ 57ನೇ ಅಧ್ಯಕ್ಷೀಯ ಚುನಾವಣೆ ಮಂಗಳವಾರ ನಡೆಯಲಿದ್ದು, ಸುಮಾರು 16 ಕೋಟಿಗೂ ಅಧಿಕ ಮತದಾರರು ಶ್ವೇತ ಭವನದ ಉತ್ತರಾಧಿಕಾರಿ ನಿರ್ಧರಿಸಲಿದ್ದಾರೆ.
`ಬದಲಾವಣೆಯ ಕಾಲ ಸನ್ನಿಹಿತವಾಗಿದೆ~ಎಂದು 2008ರ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಗೆ ಏರಿದ್ದ ಬರಾಕ್ ಒಬಾಮ ಅವರು ಈ ಚುನಾವಣೆಯಲ್ಲಿಯೂ ಗೆಲ್ಲುತ್ತಾರಾ ಎನ್ನುವ ಕುತೂಹಲಕ್ಕೆ ಡಿಸೆಂಬರ್17ರಂದು ಉತ್ತರ ಸಿಗಲಿದೆ. ಅಂದು `ಮತದಾರರ ಪ್ರತಿನಿಧಿಗಳು~ ಅಧಿಕೃತವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
ಡೆಮಾಕ್ರಟಿಕ್ ಪಕ್ಷದ ಒಬಾಮ ಹಾಗೂ ರಿಪಬ್ಲಿಕ್ ಪಕ್ಷದ ಮಿಟ್ ರೋಮ್ನಿ ಮಧ್ಯೆ ಭಾರಿ ಪೈಪೋಟಿ ನಡೆದಿದ್ದು, ಗೆಲುವು ಅತ್ಯಂತ ಕಡಿಮೆ ಅಂತರದಿಂದ ಕೂಡಿರುತ್ತದೆ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ.
ಮತದಾನಕ್ಕೆ ಹೆಚ್ಚುವರಿ ದಿನ: ಇತ್ತೀಚೆಗೆ `ಸ್ಯಾಂಡಿ~ ಚಂಡಮಾರುತ ಸೃಷ್ಟಿಸಿದ ಅವಾಂತರದಿಂದ ಮತದಾನ ಪ್ರಕ್ರಿಯೆಗೆ ಅಡ್ಡಿಯಾದಲ್ಲಿ ಅಂಥವರಿಗಾಗಿ ಮತ್ತೊಂದು ಹೆಚ್ಚುವರಿ ದಿನವನ್ನು ಮತ ಚಲಾಯಿಸಲು ಮೀಸಲಾಗಿ ಇಡಲಾಗಿದೆ.
`ಸ್ಯಾಂಡಿ~ಯ ಹೊಡೆತಕ್ಕೆ ತತ್ತರಿಸಿದ ನ್ಯೂಯಾರ್ಕ್‌ನ ಕೆಲವು ಕೌಂಟಿಗಳಲ್ಲಿ ನ.6ರಂದು ಮತದಾನ ಪ್ರಮಾಣ ಶೇ 25ರಷ್ಟು ದಾಟದಿದ್ದರೆ ಮತ್ತೊಂದು ಹೆಚ್ಚುವರಿ ದಿನವನ್ನು (ನ.7) ಮತದಾನಕ್ಕೆ ಮೀಸಲಾಗಿಡಬೇಕು ಎಂಬ ಪ್ರಸ್ತಾವ ಮುಂದಿಡಲಾಗಿದೆ. ಒಂದು ವೇಳೆ ಇದಕ್ಕೆ ಚುನಾವಣಾ ಅಧಿಕಾರಿಗಳು ಅನುಮತಿ ನೀಡಿದಲ್ಲಿ ಅಮೆರಿಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮತದಾನಕ್ಕೆ ಎರಡು ದಿನಗಳನ್ನು ಮೀಸಲಾಗಿಟ್ಟ ಚುನಾವಣೆ ಇದಾಗಲಿದೆ.
ಪರ್ಯಾಯ ಮತದಾನ ಕೇಂದ್ರ: `ಸ್ಯಾಂಡಿ~ ಚಂಡಮಾರುತದಿಂದಾಗಿ ತೀವ್ರ ಹಾನಿಗೊಳಗಾದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಮತದಾರರ ಅನುಕೂಲಕ್ಕಾಗಿ ಪರ್ಯಾಯ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಅನಿವಾಸಿ ಪ್ರಜೆ ನಿರ್ಣಾಯಕ
ನ್ಯೂಯಾರ್ಕ್ (ಪಿಟಿಐ): 160ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿರುವ ಅಮೆರಿಕ ಮೂಲದ 630 ದಶಲಕ್ಷಕ್ಕೂ ಹೆಚ್ಚು ಮತದಾರರರು ಒಬಾಮ ಅಥವಾ ಮಿಟ್ ರೋಮ್ನಿ ಈ ಇಬ್ಬರಲ್ಲಿ ಯಾರು ಶ್ವೇತಭವನ ಪ್ರವೇಶಿಸಬೇಕು ಎಂಬುವುದನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ವಿದೇಶಗಳಲ್ಲಿ ನೆಲೆಸಿರುವ ನಾಗರಿಕರು, ಸೇನೆ, ರಾಜತಾಂತ್ರಿಕ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ...ಹೀಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಅಮೆರಿಕದ ಒಂದು ರಾಜ್ಯದ ಮತದಾರರಷ್ಟಾಗುತ್ತಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎಲ್ಲರೂ ಮತದಾನ ಮಾಡಬಹುದು.
ಈ ಬಾರಿ ಈ ಮತದಾರರ ಮತಗಳು ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಎಲ್ಲರಿಗೂ ಇ-ಮೇಲ್ ಮೂಲಕ ಮತಪತ್ರ ಕಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮತದಾರರು ನೇರವಾಗಿ ಆಯ್ಕೆ ಮಾಡುವುದಿಲ್ಲ. ಬದಲಿಗೆ ಅವರು `ಅಧ್ಯಕ್ಷರನ್ನು ಆಯ್ಕೆ ಮಾಡುವ ಮತದಾರ ಪ್ರತಿನಿಧಿ~ಗಳನ್ನು ಚುನಾಯಿಸುತ್ತಾರೆ.
` ಮತದಾರ ಪ್ರತಿನಿಧಿಗಳು~ ಡಿಸೆಂಬರ್ 17ರಂದು ಅಧಿಕೃತವಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
ಸಾಮಾನ್ಯವಾಗಿ ಅತಿಹೆಚ್ಚು `ಮತದಾರ ಪ್ರತಿನಿಧಿ~ಗಳನ್ನು ಹೊಂದಿದವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.
ಅಂದರೆ, ಸಂಭವನೀಯ ಅಧ್ಯಕ್ಷರು 270 ಅಥವಾ ಅದಕ್ಕಿಂತ ಹೆಚ್ಚಿನ `ಮತದಾರ ಪ್ರತಿನಿಧಿ~ಗಳನ್ನು ಹೊಂದಿರಬೇಕಾಗುತ್ತದೆ.
ಒಂದು ವೇಳೆ ಪ್ರತಿಯೊಬ್ಬ ಅಭ್ಯರ್ಥಿಯೂ ಸಮಾನ `ಮತದಾರ ಪ್ರತಿನಿಧಿ~ಗಳನ್ನು ಹೊಂದಿದಲ್ಲಿ ಜನಪ್ರತಿನಿಧಿಗಳ ಸಭೆಯು ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಉಪಾಧ್ಯಕ್ಷರನ್ನು ಸೆನೆಟ್ ಆಯ್ಕೆ ಮಾಡುತ್ತದೆ.
ಜನಪ್ರತಿನಿಧಿಗಳು, ಸೆನೆಟ್ ಸದಸ್ಯರ ಆಯ್ಕೆ: ಅಮೆರಿಕದಲ್ಲಿ ಮಂಗಳವಾರ ಅಧ್ಯಕ್ಷೀಯ ಚುನಾವಣೆ ಜತೆಗೆ ಜನಪ್ರತಿನಿಧಿಗಳ ಸಭೆಗೆ 435ಹಾಗೂ ಸೆನೆಟ್‌ಗೆ 33 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಪ್ರಕ್ರಿಯೆಗೆ ಒಟ್ಟು 600 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಭಾರತೀಯ ಮೂಲದ ಒಟ್ಟು 3.12 ದಶಲಕ್ಷ ಜನರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
ಮತ ಚಲಾಯಿಸಲಿರುವ 99ರ ವೃದ್ಧೆ: ಫ್ಲಾರಿಡಾದ ಫೋರ್ಟ್‌ಮೇರ್ಸ್‌ನ 99 ವರ್ಷದ ವೃದ್ಧೆ ರೋಸಿ ಲೆವಿಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಶತಾಯುಷ್ಯದ ಮೆಟ್ಟಿಲಲ್ಲಿ ನಿಂತಿರುವ ರೋಸಿ ತಮ್ಮ ಜೀವಿತಾವಧಿಯಲ್ಲಿ ನಡೆದ 24 ಅಧ್ಯಕ್ಷೀಯ ಚುನಾವಣೆಗಳಲ್ಲಿ ಒಂದು ಬಾರಿಯೂ ಮತದಾನ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.