ADVERTISEMENT

ಚಂದ್ರನ ಎಲ್ಲೆಡೆ ವಿಭಿನ್ನ ನೀರು!

ನಾಸಾ ವಿಜ್ಞಾನಿಗಳ ಪ್ರತಿಪಾದನೆ

ಪಿಟಿಐ
Published 25 ಫೆಬ್ರುವರಿ 2018, 19:33 IST
Last Updated 25 ಫೆಬ್ರುವರಿ 2018, 19:33 IST
ಚಂದ್ರನ ಮೇಲ್ಮೈ  –ನಾಸಾ ಚಿತ್ರ
ಚಂದ್ರನ ಮೇಲ್ಮೈ –ನಾಸಾ ಚಿತ್ರ   

ವಾಷಿಂಗ್ಟನ್: ‘ಧ್ರುವ ಪ್ರದೇಶಗಳಲ್ಲಿ ಮಾತ್ರವಲ್ಲ, ಚಂದ್ರನ ಎಲ್ಲಾ ಭಾಗಗಳಲ್ಲೂ ನೀರು ಇದೆ’ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

‘ಚಂದ್ರನಲ್ಲಿನ ನೀರು ದ್ರವ ರೂಪದಲ್ಲಿ ಇಲ್ಲ. ಬದಲಿಗೆ ಬೇರೆ ವಸ್ತುಗಳಿಗೆ ಅಂಟಿಕೊಂಡ ರೂಪದಲ್ಲಿದೆ. ಚಂದ್ರನ ನೀರಿನ ರಾಸಾಯನಿಕ ಸಂಯೋಜನೆಯು ಭೂಮಿಯ ನೀರಿನ ರಾಸಾಯನಿಕ ಸಂಯೋಜನೆಗಿಂತ ಭಿನ್ನವಾಗಿದೆ’ ಎಂದು ಅವರು ಹೇಳಿದ್ದಾರೆ.

ಭಾರತದ ‘ಚಂದ್ರಯಾನ–1’ರಲ್ಲಿ ಬಳಸಿದ್ದ ‘ಮೂನ್ ಮಿನರಲಾಜಿ ಮ್ಯಾಪರ್’ ಎಂಬ ಇನ್ಫ್ರಾರೆಡ್ ಸ್ಪೆಕ್ಟ್ರೊಮೀಟರ್‌ ಬಳಸಿ ನಡೆಸಿದ್ದ ಸಂಶೋಧನೆಯಲ್ಲಿ ಈ ಅಂಶ ಪತ್ತೆಯಾಗಿವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ADVERTISEMENT

ಚಂದ್ರಯಾನ–1 ಯೋಜನೆಗೆ ನಾಸಾದ ಜೆಟ್ ಪ್ರಪಲ್ಷನ್ ಲ್ಯಾಬೊರೇಟರಿಯು ‘ಮೂನ್ ಮಿನರಲಾಜಿ ಮ್ಯಾಪರ್’ ಒದಗಿಸಿತ್ತು ಎಂಬ ಮಾಹಿತಿ ‘ನೇಚರ್ ಜಿಯೊಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿಯಲ್ಲಿದೆ.

ಭೂಮಿಯ ನೀರಿನಲ್ಲಿ ಜಲಜನಕದ ಎರಡು ಅಣು ಮತ್ತು ಆಮ್ಲಜನಕದ ಒಂದು ಅಣು (ಎಚ್‌2ಒ) ಇರುತ್ತದೆ. ಆದರೆ ಚಂದ್ರನ ನೀರಿನಲ್ಲಿ ಜಲಜನಕ ಮತ್ತು ಆಮ್ಲಜನಕ ತಲಾ ಒಂದು ಅಣು(ಎಚ್‌ಒ) ಮಾತ್ರ ಹೊಂದಿದೆ.

ಎಚ್‌ಒ ಅನ್ನು ಹೈಡ್ರಾಕ್ಸಿಲ್ ಎಂದು ಕರೆಯಲಾಗುತ್ತದೆ. ಹೈಡ್ರಾಕ್ಸಿಲ್ ಅತ್ಯಂತ ಚುರುಕಿನ ಸಂಯುಕ್ತ ವಸ್ತುವಾಗಿದ್ದು, ಸಂಪರ್ಕಕ್ಕೆ ಬಂದ ಯಾವುದೇ ವಸ್ತುಗಳಿಗೆ ಅಂಟಿಕೊಳ್ಳುತ್ತದೆ. ಚಂದ್ರನ ಮೇಲ್ಮೈನಲ್ಲಿರುವ ಅಂತಹ ವಸ್ತುಗಳಿಂದ ಹೈಡ್ರಾಕ್ಸಿಲ್ ಅನ್ನು ಬೇರ್ಪಡಿಸಬೇಕು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ನೀರು ಇದೆ ಎಂದು ಈ ಹಿಂದಿನ ಹಲವು ಸಂಶೋಧನೆಗಳು ಹೇಳಿವೆ. ಆದರೆ ಮೂನ್ ಮಿನರಲಾಜಿ ಮ್ಯಾಪರ್ ಮೂಲಕ ಸಂಗ್ರಹಿಸಿದ ದತ್ತಾಂಶಗಳು ಚಂದ್ರನ ಎಲ್ಲಾ ಭಾಗದಲ್ಲೂ ನೀರಿನಂಶ ಇರುವುದನ್ನು ತೋರಿಸಿದೆ.

ದಿನದ ಎಲ್ಲಾ ಸಮಯದಲ್ಲೂ, ವರ್ಷದ ಎಲ್ಲಾ ಋತುಗಳಲ್ಲೂ ಚಂದ್ರನ ಮೇಲೆ ನೀರು ಇದ್ದೇ ಇರುತ್ತದೆ ಎಂಬುದೂ ಈ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಅದನ್ನು ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ಪತ್ತೆಮಾಡಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಚಂದ್ರನ ಮೇಲೆ ಎಷ್ಟು ನೀರಿದೆ ಎಂಬುದು ಇನ್ನೂ ತಿಳಿದಿಲ್ಲ. ಒಂದೊಮ್ಮೆ ಅಲ್ಲಿ ಸಾಕಷ್ಟು ನೀರು ಇದ್ದರೆ ಮತ್ತು ಆ ನೀರನ್ನು ಪಡೆದುಕೊಳ್ಳುವುದು ಸಾಧ್ಯವಾದರೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಅದೊಂದು ಬಹುದೊಡ್ಡ ಮೈಲುಗಲ್ಲಾಗುತ್ತದೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ಸಾಧ್ಯವಾದರೆ ಬಾಹ್ಯಾಕಾಶಯಾನಿಗಳು ಚಂದ್ರನ ಮೇಲಿನ ನೀರನ್ನು ಕುಡಿಯಲು ಬಳಸಬಹುದೇ, ನೀರನ್ನು ವಿಭಜಿಸಿ ಅದರಲ್ಲಿನ ಜಲಜನಕವನ್ನು ರಾಕೆಟ್‌ಗಳಲ್ಲಿ ಇಂಧನವಾಗಿ ಬಳಸಬಹುದೇ ಮತ್ತು ಆಮ್ಲಜನಕವನ್ನು ಉಸಿರಾಡಲು ಬಳಸಬಹುದೇ ಎಂಬುದರ ಬಗ್ಗೆ ಸಂಶೋಧನೆ ಆರಂಭಿಸಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

**

ವಿವರ

ಭಾರತದ ಚಂದ್ರಯಾನ–1ರ ಉಪಕರಣ ಬಳಸಿ ನಾಸಾ ಸಂಶೋಧನೆ

ಚಂದ್ರಯಾನಕ್ಕೆ ನಾಸಾ ಒದಗಿಸಿದ್ದ ‘ಮೂನ್ ಮಿನರಲಾಜಿ ಮ್ಯಾಪರ್‌’ ಉಪಕರಣ

ಚಂದ್ರನಲ್ಲಿರುವ ನೀರು ಎಚ್‌ಒ ಸಂಯೋಜನೆಯದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.