ADVERTISEMENT

ಚರ್ಚ್ ಮೇಲೆ ದಾಳಿ: 20 ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಅಬುಜಾ (ಪಿಟಿಐ): ಆತ್ಮಾಹುತಿ ಕಾರ್ ಬಾಂಬ್ ದಾಳಿಕೋರನೊಬ್ಬ ಕ್ಯಾಥೊಲಿಕ್ ಚರ್ಚ್ ಅನ್ನು ಗುರಿಯಾಗಿಟ್ಟು ನಡೆಸಿದ ದಾಳಿ ಹಾಗೂ ಆ ನಂತರದ ಹಿಂಸಾಚಾರದಲ್ಲಿ ಕನಿಷ್ಠ 20 ಜನ ಮೃತರಾಗಿರುವ ಘಟನೆ ನೈಜೀರಿಯಾದ ಜೋಸ್ ನಗರದಲ್ಲಿ ಭಾನುವಾರ ನಡೆದಿದೆ.

ನಗರದ ಕೇಂದ್ರ ಭಾಗದಲ್ಲಿರುವ ಸಂತ ಫಿನ್‌ಬರ್ ಕ್ಯಾಥೊಲಿಕ್ ಚರ್ಚ್‌ನ ಪ್ರಾರ್ಥನೆಯಲ್ಲಿ ಅತ್ಯಧಿಕ ಜನ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಚರ್ಚ್‌ನ ಆವರಣದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸೇವಕರು ತಡೆದದ್ದರಿಂದ ದಾಳಿಕೋರನಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಅವರೊಂದಿಗೆ ಆತ ಹೊರಗೆ ವಾಗ್ವಾದ  ನಡೆಸುತ್ತಿದ್ದ ಸಂದರ್ಭದಲ್ಲೇ ಬಾಂಬ್ ಸ್ಫೋಟಿಸಿ 10 ಜನ ಸಾವಿಗೀಡಾಗಿ ಹಲವರು ಗಾಯಗೊಂಡರು.
 
ಸತ್ತವರಲ್ಲಿ ಬಹುತೇಕರು ಚರ್ಚ್‌ಗೆ ಬರುತ್ತಿದ್ದವರ ವಾಹನಗಳ ನಿಲುಗಡೆಗೆ ಸಲಹೆ ನೀಡುತ್ತಿದ್ದ ಯುವಕರೇ ಆಗಿದ್ದಾರೆ. ವಿಷಯ ತಿಳಿದ ನಗರದ ಯುವ ಕ್ರೈಸ್ತರು ಬೀದಿಗಿಳಿದು ಮತ್ತೊಂದು ಕೋಮಿನವರ ಮೇಲೆ ದಾಳಿ ನಡೆಸಿದಾಗ 10 ಜನ ಮೃತರಾದರು.

ಆಫ್ರಿಕಾದ ಬೃಹತ್ ತೈಲ ಉತ್ಪಾದಕ ರಾಷ್ಟ್ರವಾದ ನೈಜೀರಿಯಾದಲ್ಲಿ ಇಸ್ಲಾಂ ಸರ್ಕಾರ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯೋತ್ಪಾದಕ ಸಂಘಟನೆ ಬೋಕೊ ಹರಾಂ, ದೇಶದ ಚರ್ಚ್‌ಗಳು ಮತ್ತು ಮಸೀದಿಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಾ ಹಲವರನ್ನು ಬಲಿ ತೆಗೆದುಕೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.