ADVERTISEMENT

ಚೀನಾದ ಔಷಧ, ಐಟಿ ಕ್ಷೇತ್ರದತ್ತ ಭಾರತದ ಕಣ್ಣು: ಮುಕ್ತ ಮಾರುಕಟ್ಟೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST
ಚೀನಾದ ಔಷಧ, ಐಟಿ ಕ್ಷೇತ್ರದತ್ತ ಭಾರತದ ಕಣ್ಣು: ಮುಕ್ತ ಮಾರುಕಟ್ಟೆಗೆ ಮನವಿ
ಚೀನಾದ ಔಷಧ, ಐಟಿ ಕ್ಷೇತ್ರದತ್ತ ಭಾರತದ ಕಣ್ಣು: ಮುಕ್ತ ಮಾರುಕಟ್ಟೆಗೆ ಮನವಿ   

ಬೀಜಿಂಗ್ (ಪಿಟಿಐ): ಚೀನಾ ತನ್ನ ಬೃಹತ್ ಪ್ರಮಾಣದ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ಕ್ಷೇತ್ರಗಳಲ್ಲಿ ಮುಕ್ತ ಮಾರುಕಟ್ಟೆಯ ವಾತಾವರಣ ಉಂಟು ಮಾಡುವಂತೆ ಭಾರತ ಆಗ್ರಹಿಸಿದೆ.

ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ, ವಾಣಿಜ್ಯ ವಹಿವಾಟುಗಳಲ್ಲಿ ಸಮತೋಲನ ಮತ್ತು ವೃದ್ಧಿ ಕಂಡು ಬರಲಿದೆ ಎಂದು ಭಾರತ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ದೇಶಗಳ ನಡುವೆ ಆರ್ಥಿಕ ವಿಷಯಗಳಿಗೇ ಸಂಬಂಧಿಸಿದಂತೆ ನಡೆದ ಮೊದಲ ಹಂತದ ಮಾತುಕತೆಗಳ ಸಂದರ್ಭದಲ್ಲಿ ಅಹ್ಲುವಾಲಿಯಾ ಅವರು, `ಭಾರತದ ಸ್ಪರ್ಧಾತ್ಮಕ ಶಕ್ತಿ ಈಗ ಪ್ರಶ್ನಾತೀತವಾಗಿದೆ. ಈ ಸಂದರ್ಭದಲ್ಲಿ ಭಾರತದ ಮಾರುಕಟ್ಟೆಯ ಕಾಳಜಿಗಳನ್ನು ಚೀನಾ ಅರ್ಥ ಮಾಡಿಕೊಂಡಿದೆ ಎಂಬ ಭಾವನೆ ನನಗಿದೆ. ಆದ್ದರಿಂದ ಚೀನಾ ತನ್ನ ಬೃಹತ್ ಪ್ರಮಾಣದ ಔಷಧೀಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತಕ್ಕೆ ಅನುಕೂಲವಾಗುವಂತಹ ಪೂರಕ ವಾತಾವರಣ ಸೃಷ್ಟಿಸಬೇಕು. ಉಭಯ ದೇಶಗಳ ನಡುವಿನ ಬಂಡವಾಳ ಹೂಡಿಕೆ ಇನ್ನಷ್ಟು ವೃದ್ಧಿಯಾಗಬೇಕು~ ಎಂದರು.

ಸಹಕಾರ ವೃದ್ಧಿಗೆ ಕರೆ: ಬ್ರಹ್ಮಪುತ್ರಾ ಹಾಗೂ ಸಟ್ಲೇಜ್ ನದಿಗಳ ನೀರು ಹಂಚಿಕೆ ಕುರಿತಂತೆ ಚೀನಾ ತನ್ನ ಸಹಕಾರವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಅಹ್ಲುವಾಲಿಯಾ ಇದೇ ಸಂದರ್ಭದಲ್ಲಿ ಆಶಿಸಿದರು.

ಬ್ರಹ್ಮಪುತ್ರಾ ಹಾಗೂ ಸಟ್ಲೇಜ್ ನದಿಗಳಿಂದ ಪ್ರವಾಹ ಉಂಟಾದ ಸಂದರ್ಭದಲ್ಲಿ ಚೀನಾ ಸರ್ಕಾರವು ಭಾರತಕ್ಕೆ ಒದಗಿಸಿದ ತಾಂತ್ರಿಕ ನೆರವಿನ ಬಗ್ಗೆ ಅಹ್ಲುವಾಲಿಯಾ ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು. ಇಂತಹ ಪ್ರಯತ್ನಗಳು ಉತ್ತಮ ಸಂಪ್ರದಾಯಕ್ಕೆ ನಾಂದಿಯಾಗುತ್ತವೆ ಎಂದರು. 
ಈ ಸಮಾವೇಶದಲ್ಲಿ ನಡೆದ ಚರ್ಚೆ ಕೇವಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆಗೆ ಅಗತ್ಯವಾದ ತಾಂತ್ರಿಕತೆಯ ಮತ್ತು ಕೃಷಿ ನೀರಾವರಿಯ ಬಗ್ಗೆ ಸೀಮಿತವಾಗಿದ್ದವು ಎಂದು ಭಾರತದ ನಿಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.