ADVERTISEMENT

ಚೀನಾದ ಡ್ರ್ಯಾಗನ್, ಭಾರತದ ಆನೆ ಸೇರಿ ನೃತ್ಯ ಮಾಡಬೇಕು

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅಭಿಪ್ರಾಯ

ಪಿಟಿಐ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ವಾಂಗ್‌ ಯಿ
ವಾಂಗ್‌ ಯಿ   

ಬೀಜಿಂಗ್: ‘ಭಾರತ ಹಾಗೂ ಚೀನಾ ಸ್ವಯಂ ನಿಯಂತ್ರಣ ಸಾಧಿಸಿ, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಲು ಯತ್ನಿಸಿದಲ್ಲಿ, ಉಭಯ ದೇಶಗಳ ಸ್ನೇಹವನ್ನು ಹಿಮಾಲಯವೂ ತಡೆಯಲಾಗದು’ ಎಂದು ಚೀನಾದ ವಿದೇಶಾಂಗ ವ್ಯವಹಾರ ಸಚಿವ ವಾಂಗ್ ಯಿ ಅವರು ಗುರುವಾರ ಹೇಳಿದ್ದಾರೆ.

ದೋಕಲಾ ಬಿಕ್ಕಟ್ಟಿನ ಬಳಿಕ ಭಾರತದ ಜತೆಗಿನ ಸಂಬಂಧವನ್ನು ಚೀನಾ ನೋಡುವ ದೃಷ್ಟಿಕೋನ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಂಗ್, ಕೆಲವು ಸಂದಿಗ್ಧತೆಗಳ ನಡುವೆಯೂ ಉಭಯ ದೇಶಗಳ ಸಂಬಂಧ ವೃದ್ಧಿಸುತ್ತಿದೆ. ಭಾರತದ ಜೊತೆ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾವು ನ್ಯಾಯಸಮ್ಮತ ಆಸಕ್ತಿ ಹಾಗೂ ಹಕ್ಕುಗಳನ್ನು ಬೆಂಬಲಿಸುತ್ತಿದೆ’ ಎಂದಿದ್ದಾರೆ. 

‘ಭವಿಷ್ಯದಲ್ಲಿ ನಮ್ಮ ನಡುವಿನ ಮೈತ್ರಿ ಮುಂದುವರಿಸಬೇಕಾದರೆ ಎರಡೂ ದೇಶಗಳ ನಾಯಕರು ದೂರದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಚೀನಾದ ಡ್ರ್ಯಾಗನ್ ಹಾಗೂ ಭಾರತದ ಆನೆ ಪರಸ್ಪರ ಯುದ್ಧ ಮಾಡದೇ, ನೃತ್ಯ ಮಾಡಬೇಕು. ಒಂದು ಮತ್ತು ಒಂದು ಸೇರಿದರೆ ಎರಡಲ್ಲ, ಹನ್ನೊಂದಾಗುತ್ತದೆ’ ಎಂದು ವಾಂಗ್ ಅವರು ವಿವರಿಸಿದ್ದಾರೆ.

ADVERTISEMENT

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್, ಉಗ್ರ ಅಜರ್ ಮಸೂದ್‌ನನ್ನು ವಿಶ್ವಸಂಸ್ಥೆ ನಿಷೇಧಿತರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಅಡ್ಡಿ, ಎನ್‌ಎಸ್‌ಜಿ ಸಮೂಹಕ್ಕೆ ಭಾರತ ಸೇರ್ಪಡೆಗೆ ಚೀನಾ ಅಡ್ಡಿಪಡಿಸಿದ ವಿಷಯಗಳು ಉಭಯ ದೇಶಗಳ ಬಾಂಧವ್ಯಕ್ಕೆ ಅಡ್ಡಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.