ADVERTISEMENT

ಚೀನಾ ಮುಂದೆ ಆತಂಕ ತೋಡಿಕೊಂಡ ಭಾರತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಬೀಜಿಂಗ್ (ಪಿಟಿಐ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೈನಿಕರ ಜಮಾವಣೆ ಕುರಿತು ಆ ರಾಷ್ಟ್ರದ ಉನ್ನತ ಮುಖಂಡರ ಬಳಿ ಭಾರತ ತನ್ನ ಆತಂಕ ವ್ಯಕ್ತಪಡಿಸಿದೆ.

ಚೀನಾದ ವಿದೇಶಾಂಗ ಸಚಿವ ಯಾಂಗ್ ಜೀಚಿ ಸೇರಿದಂತೆ ನಾಲ್ವರು ಉನ್ನತ ಮುಖಂಡರೊಂದಿಗೆ ಇಲ್ಲಿ ನಡೆಸಿದ ಮಾತುಕತೆ ವೇಳೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಈ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಭಾರತದ ಕಳಕಳಿಯನ್ನು ಮನವರಿಕೆ ಮಾಡಿಕೊಟ್ಟರು.

`ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದನ್ನು ಸಹ ಮುಖಂಡರ ಗಮನಕ್ಕೆ ತರಲಾಯಿತು~ ಎಂದು ಸಚಿವರು ನಂತರ ಮಾಧ್ಯಮಗಳಿಗೆ ತಿಳಿಸಿದರು.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸೇರಿದಂತೆ 4 ಸಾವಿರ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದ್ದಾರೆ ಎಂದು ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಇತ್ತೀಚೆಗೆ ನವದೆಹಲಿಯಲ್ಲಿ ಹೇಳಿದ್ದರು.

10 ಸಾವಿರ ಕೋಟಿ ಗುರಿ
: ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು 2015ರ ವೇಳೆಗೆ 10 ಸಾವಿರ ಕೋಟಿ ಡಾಲರ್‌ಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ಕೃಷ್ಣ ಮಾಹಿತಿ ನೀಡಿದರು. ಕಳೆದ ವರ್ಷ ಈ ವಹಿವಾಟು 7,400  ಕೋಟಿ ಡಾಲರ್ ಇತ್ತು.

`ಆರ್ಥಿಕ ಕ್ಷೇತ್ರದಲ್ಲಿ ಪರಸ್ಪರ  ಸಹಕಾರಕ್ಕಾಗಿ ಕಳೆದ ವರ್ಷ ಆರ್ಥಿಕ ಚರ್ಚಾ ಘಟಕ ಸ್ಥಾಪಿಸಲಾಗಿದೆ. ದ್ವಿಪಕ್ಷೀಯ ವ್ಯಾಪಾರ ಸಕಾರಾತ್ಮಕ ದಿಸೆಯಲ್ಲಿ ಮುನ್ನಡೆಯುತ್ತಿದೆ. ಇನ್ನಷ್ಟು ಕಠಿಣ ಪರಿಶ್ರಮದಿಂದ ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು~ ಎಂದು ಅವರು 1 ಕೋಟಿ ಡಾಲರ್ ಮೌಲ್ಯದ ನೂತನ ಭಾರತೀಯ ರಾಯಭಾರ ಕಚೇರಿಉದ್ಘಾಟಿಸಿದ ವೇಳೆ ತಿಳಿಸಿದರು.

ಭಾರತದಿಂದ ಚೀನಾಗೆ ಕೃಷಿ, ಕೈಗಾರಿಕಾ ಕ್ಷೇತ್ರದ ವಸ್ತುಗಳ ರಫ್ತಿನ ಪ್ರಮಾಣ ಹೆಚ್ಚಾಗಿದೆ. ಆದರೆ ಕರ್ನಾಟಕ ಮತ್ತು ಗೋವಾಗಳಲ್ಲಿ ಗಣಿಗಾರಿಕೆಗೆ ನಿಷೇಧ ಹೇರಿರುವುದರಿಂದ ಅದಿರು ರಫ್ತಿನ ಪ್ರಮಾಣ ತಗ್ಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.