ADVERTISEMENT

ಜಪಾನ್ ದುರಂತ:ಅತಿ ದೊಡ್ಡ ವಿಪತ್ತು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಜಪಾನ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ತನ್ನ ಸಾವಿರಾರು ಸಿಬ್ಬಂದಿ ಮತ್ತು ಸುಮಾರು ಹನ್ನೆರಡು ಹಡಗುಗಳನ್ನು ನಿಯೋಜಿಸಿರುವ ಅಮೆರಿಕ, ಇದು ಬಹುದೊಡ್ಡ ನೈಸರ್ಗಿಕ ಮತ್ತು ಮಾನವಕೃತ್ಯದ ವಿಪತ್ತು ಒಂದು ಎಂದು ಬಣ್ಣಿಸಿದೆ.

ಹವಾಯ್‌ನಿಂದ ಟೆಲಿ ಕಾನ್ಫರೆನ್ಸ್ ಮೂಲಕ ಸುದ್ದಿಗಾರರ ಜೊತೆ ಮಾತನಾಡಿದ ಅಮೆರಿಕದ ಪೆಸಿಫಿಕ್ ಕಮಾಂಡ್ ಕಮಾಂಡರ್ ಅಡ್ಮಿರಲ್ ರಾಬರ್ಟ್ ವಿಲ್ಲರ್ಡ್ ಅವರು, ‘ನಮ್ಮ ಜೀವಮಾನದ ಅವಧಿಯಲ್ಲೇ ಅತ್ಯಂತ ದೊಡ್ಡ ನೈಸರ್ಗಿಕ ವಿಕೋಪ ಮತ್ತು ಮನುಷ್ಯ ಸ್ವತಃ ತಾನೇ ಬರಮಾಡಿಕೊಂಡ ವಿಪತ್ತಿನ ಪರಿಹಾರ ಕಾರ್ಯದಲ್ಲಿ ನಾವು ಈಗ ತೊಡಗಿಕೊಂಡಿದ್ದೇವೆ’ ಎಂದಿದ್ದಾರೆ.

ಜಪಾನ್‌ನ ಭೂಕಂಪ ಮತ್ತು ಸುನಾಮಿ ಸಂತ್ರಸ್ತರಿಗಾಗಿ  ಆರಂಭಿಕ ಪರಿಹಾರ ಹಣವಾಗಿ 3.50 ಕೋಟಿ ಡಾಲರ್‌ವರೆಗೆ ಬಿಡುಗಡೆ ಮಾಡಲು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಅವರಿಗೆ ಗುರುವಾರ ಅಧಿಕಾರ ನೀಡಲಾಗಿದೆ.

ವಿದೇಶಾಂಗ ಇಲಾಖೆ ನಿಗದಿಪಡಿಸಿದ ಪರಿಹಾರ ಹಣದ ಜೊತೆಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ ಎಂದು ಪೆಂಟಗಾನ್ ವಕ್ತಾರ ಡೇವ್ ಲಪಾನ್ ಅವರು ಹೇಳಿದ್ದಾರೆ.

‘9.0 ತೀವ್ರತೆಯ ಭೂಕಂಪ, 10 ಮೀಟರ್‌ವರೆಗಿನ ಸುನಾಮಿ ಅಲೆ, ಜಪಾನ್ ಜನರು ಅನುಭವಿಸಿದ ನಂತರದ ಆಘಾತಗಳು ಮತ್ತು ಅಣು ಸ್ಥಾವರದ ರಿಯಾಕ್ಟರ್ ಸ್ಫೋಟ ಇವೆಲ್ಲಾ ಒಟ್ಟಾಗಿ ಈಶಾನ್ಯಭಾಗದ ಹೊನ್ಷುನಲ್ಲಿ ಹಿಂದೆಂದೂ ಕಂಡರಿಯದ ಬಿಕ್ಕಟ್ಟನ್ನು ಸೃಷ್ಟಿಸಿವೆ’ ಎಂದು ವಿಲ್ಲರ್ಡ್ ಅಭಿಪ್ರಾಯ ಪಟ್ಟಿದ್ದಾರೆ.

 ‘ವಿಕಿರಣ ಅಂಶದ ನಿಯಂತ್ರಣ ಮತ್ತು ವಿಕಿರಣದ ದುಷ್ಪರಿಣಾಮವಾಗದಂತೆ ನೆರವು ನೀಡುವ ತಂಡಗಳನ್ನು ನಾವು ಹೊಂದಿದ್ದೇವೆ. ಇಂತಹ ವಾತಾವರಣದಲ್ಲಿ ಸ್ವಂತ ಸಾಮರ್ಥ್ಯದ ಮೇಲೆ ಕೆಲಸ ನಿರ್ವಹಿಸುವ ಪರಿಣಾಮಕಾರಿ ಸೇನಾಪಡೆಯನ್ನು ಅಮೆರಿಕ ಹೊಂದಿದೆ ಮತ್ತು ನಮಗೆ ಅಗತ್ಯ ಇರುವ ಕಡೆಗಳಲ್ಲಿ ಈ ತಂಡಗಳ ನೆರವು ಪಡೆಯುತ್ತೇವೆ’ ಎಂದು ಹೇಳಿದ್ದಾರೆ.

ಜಪಾನ್‌ನ ಮುಖ್ಯ ದ್ವೀಪವಾದ ಈಶಾನ್ಯಭಾಗದ ಹೊನ್ಷುನಲ್ಲಿ ನಿರ್ಗತಿಕರಾಗಿರುವ 500,000ಕ್ಕೂ ಹೆಚ್ಚು ಜನರಿಗೆ ಪೆಸಿಫಿಕ್ ಕಮಾಂಡ್ ಆಹಾರ, ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿದೆ  ಎಂದಿರುವ ಅವರು ‘ಜಪಾನ್ ಪೂರ್ಣ ಚೇತರಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ ಮತ್ತು ಇದಕ್ಕಾಗಿ ನಾವು ಎಲ್ಲಾ ನೆರವನ್ನು ನೀಡುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.