ADVERTISEMENT

`ಜರ್ದಾರಿ ಸ್ವದೇಶಕ್ಕೆ ಮರಳುತ್ತಾರೆ'

ವಿದೇಶ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST
`ಜರ್ದಾರಿ ಸ್ವದೇಶಕ್ಕೆ ಮರಳುತ್ತಾರೆ'
`ಜರ್ದಾರಿ ಸ್ವದೇಶಕ್ಕೆ ಮರಳುತ್ತಾರೆ'   

ಇಸ್ಲಾಮಾಬಾದ್ (ಪಿಟಿಐ): `ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಏನೇ ಆದರೂ ಸ್ವದೇಶಕ್ಕೆ ಮರಳುತ್ತಾರೆ' ಎಂದು ಸೋಮವಾರ ಅವರ ವಕ್ತಾರರೊಬ್ಬರು ತಿಳಿಸಿದ್ದಾರೆ.

`ಭ್ರಷ್ಟಾಚಾರದ ಆರೋಪ ಹಾಗೂ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಜರ್ದಾರಿ ಅವರು ತಮ್ಮ ಅಧಿಕಾರಾವಾಧಿ ಪೂರ್ಣಗೊಳ್ಳುವವರೆಗೂ ವಿದೇಶದಲ್ಲಿಯೇ ಇರುತ್ತಾರೆ' ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸೆಪ್ಟೆಂಬರ್ ಎಂಟಕ್ಕೆ ಜರ್ದಾರಿ ಆಳ್ವಿಕೆ ಕೊನೆಗೊಳ್ಳಲಿದೆ.

`ಪಾಕ್ ಅಧ್ಯಕ್ಷರು ದುಬೈಗೆ ಹೋಗಿದ್ದಾರೆ. ಅಲ್ಲಿಂದ ಲಂಡನ್‌ಗೆ ತೆರಳುತ್ತಾರೆ' ಎಂದು ವಕ್ತಾರ ಫರ‌್ಹತ್ ಉಲ್ಲಾ ಬಾಬರ್ ತಿಳಿಸಿದ್ದಾರೆ.


ಭಾರತ ಪ್ರಜೆಯ ಶವ ಪತ್ತೆ
ದುಬೈ(ಪಿಟಿಐ):
ಕಳೆದ ವಾರ ನಾಪತ್ತೆಯಾಗಿದ್ದ, ಭಾರತ ಮೂಲದ 26ವರ್ಷದ ವ್ಯಕ್ತಿಯ ಶವ ಬಾಡಿಗೆ ಕಾರೊಂದರಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿ ಕೇರಳ ಮೂಲದ ನಿತಿನ್. ಇವರು ಇಲ್ಲಿನ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಸಹಾಯಕರಾಗಿದ್ದರು.

`ಇತ್ತೀಚೆಗಷ್ಟೇ ವಾಹನ ಚಾಲನಾ ಪರವಾನಗಿ ಪಡೆದಿದ್ದ  ನಿತಿನ್ ಇನ್ನೂ ಸರಿಯಾಗಿ ವಾಹನ ನಡೆಸಲು ಕಲಿತಿರಲಿಲ್ಲ' ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಲಂಚದ ವಿರುದ್ಧ ಚೀನಾ ಸಮರ
ಬೀಜಿಂಗ್ (ಪಿಟಿಐ):
ಸುಮಾರು 8.30 ಲಕ್ಷ ಉದ್ಯಮಗಳು, ಸಂಸ್ಥೆಗಳು ಮತ್ತು ದಶಲಕ್ಷಕ್ಕೂ ಹೆಚ್ಚಿನವರ ವಿರುದ್ಧ ಲಂಚ ಪ್ರಕರಣದ ಬಗ್ಗೆ ತನಿಖೆ ನಡೆಸಲು ಚೀನಾ ಮುಂದಾಗಿದೆ.

ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಚೀನಾ ನೂತನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತನಿಖೆಗೆ ನಿರ್ದೇಶನ ನೀಡಿದ್ದಾರೆ. ದಶಕಗಳ ಹಿಂದೆ ಚೀನಾ ಮಾಜಿ ಅಧ್ಯಕ್ಷ ಮಾವೊ ಜೆಡಾಂಗ್ ಕೂಡ ಇಂತಹುದೇ ಅಭಿಯಾನ ನಡೆಸಿದ್ದರು.

ಮೆಲ್ಬರ್ನ್: ಸರೀಸೃಪ ಕಳವು
ಮೆಲ್ಬರ್ನ್ (ಪಿಟಿಐ):
ಆಸ್ಟ್ರೇಲಿಯಾದ ಪ್ರಾಣಿಸಂಗ್ರಹಾಲಯದ ಮೊಸಳೆ, ಹೆಬ್ಬಾವು ಹಾಗೂ ಆಮೆ ಸೇರಿದಂತೆ ಕನಿಷ್ಠ ಎರಡು ಡಜನ್ ಸರೀಸೃಪಗಳನ್ನು ಕಳವು ಮಾಡಲಾಗಿದೆ.

ನ್ಯೂ ಸೌತ್ ವೇಲ್ಸ್‌ನ ಉದ್ಯಾನಕ್ಕೆ ದಾಳಿ ಇಟ್ಟ ಕಳ್ಳರು ಸುಮಾರು 23 ಸರೀಸೃಪಗಳನ್ನು ಕಳವು ಮಾಡಿದ್ದು, ಕಳ್ಳರ ಪತ್ತೆಗಾಗಿ ಉದ್ಯಾನದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಬೆನ್ ಜಾನ್ಸನ್ ಯಾನ ಮರುಸೃಷ್ಟಿ
ಲಂಡನ್(ಪಿಟಿಐ):
ಖ್ಯಾತ ನಾಟಕಕಾರ ಬೆನ್ ಜಾನ್ಸನ್ ಅವರು ಸುಮಾರು 400 ವರ್ಷಗಳ ಹಿಂದೆ ಕಾಲ್ನಡಿಗೆ ಮೂಲಕ ಇಂಗ್ಲೆಂಡ್‌ನಿಂದ ಸ್ಕಾಟ್ಲೆಂಡ್‌ಗೆ ಕೈಗೊಂಡಿದ್ದ ಐತಿಹಾಸಿಕ ಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮರುಸೃಷ್ಟಿಮಾಡಲಾಗುತ್ತಿದೆ.

ಜಾನ್ಸನ್ ಯಾನದ ಮಾಹಿತಿಯನ್ನು ಟ್ವಿಟರ್, ಫೇಸ್‌ಬುಕ್ ಹಾಗೂ ಬ್ಲಾಗ್‌ಗಳಲ್ಲಿ ನೋಡಬಹುದು. 1619ರಲ್ಲಿ ಎಡಿನ್‌ಬರ್ಗ್‌ನಿಂದ ವಾಪಸಾದ ನಂತರ ಜಾನ್ಸನ್ `ಫೂಟ್ ವೊಯೇಜ್' ಕೃತಿ ರಚಿಸಿದ್ದರು. ಆದರೆ ಪ್ರಕಟಣೆಯ ಮುನ್ನವೇ ಅದನ್ನು ಸುಟ್ಟು ಹಾಕಲಾಗಿತ್ತು.

ಭಾರತೀಯ ನಾವಿಕ ಸಾವು
ಕ್ವಾಲಾಲಂಪುರ(ಪಿಟಿಐ):
ಮಲೇಷ್ಯಾದ ಕರಾವಳಿಯಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಭಾರತದ ನಾವಿಕನೊಬ್ಬ ಮೃತಪಟ್ಟಿದ್ದು, ಇನ್ನುಳಿದ 22 ಮಂದಿಯನ್ನು ರಕ್ಷಿಸಲಾಗಿದೆ. ಇವರೆಲ್ಲ ಭಾರತದವರು.

ಭಾರತ ಮೂಲದ ಎಂಟಿ ಸಮುದೇರಾ ಹೆಸರಿನ ಟ್ಯಾಂಕರ್‌ನ ಎಂಜಿನ್ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಇತರೆಡೆ ಹಬ್ಬಿತು ಎಂದು ಸಿಬ್ಬಂದಿ ಹೇಳಿದ್ದಾರೆ. ಈ ಟ್ಯಾಂಕರ್ ಇಂಡೋನೇಷ್ಯಾದ ಬಾಟಂ ದ್ವೀಪದಿಂದ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ತೆರಳುತ್ತಿತ್ತು.

ಇಂಗ್ಲಿಷ್ ಕಾಲುವೆಯಲ್ಲಿ ಸಾವು
ಲಂಡನ್ (ಪಿಟಿಐ):
ಸೇವಾ ಪ್ರತಿಷ್ಠಾನಕ್ಕೆ ಹಣ ಸಂಗ್ರಹಿಸಲು ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಈಜುತ್ತಿದ್ದಾಗ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಲೀಸ್ಟರ್‌ಶೈರ್‌ನ ಬರ್‌ವೆಲ್‌ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೂಸನ್ ಟೇಲರ್ ಎಂದು ಗುರುತಿಸಲಾಗಿದೆ.

`ಕಾಲುವೆಯಲ್ಲಿ ಈಜುತ್ತಿದ್ದಾಗ ನನ್ನ ಸಹೋದರಿ ಇದ್ದಕ್ಕಿಂದ್ದಂತೆ ನಿತ್ರಾಣಗೊಂಡರು. ಕೂಡಲೇ ಅವರನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ' ಎಂದು ಸೂಸನ್ ಅವರ ಸಹೋದರಿ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಮಹಿಳಾ ಸೇನಾಧಿಕಾರಿಗಳ ದಾಖಲೆ
ಇಸ್ಲಾಮಾಬಾದ್ (ಐಎಎನ್‌ಎಸ್):
ಪಾಕಿಸ್ತಾನ ಸೇನೆಯ ಮಹಿಳಾ ಅಧಿಕಾರಿಗಳು ಮೊದಲ ಬಾರಿಗೆ ಸೇನಾ ಹೆಲಿಕಾಪ್ಟರ್‌ನಿಂದ ಜಿಗಿದು ದೇಶದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಒಟ್ಟು 24 ಮಹಿಳಾ ಅಧಿಕಾರಿಗಳು ಪೆಶಾವರದ ಪ್ಯಾರಾಶೂಟ್ ತರಬೇತಿ ಶಾಲೆಯಲ್ಲಿ ಮೂರು ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಕ್ಯಾಪ್ಟನ್ ಸಾದಿಯಾ ಅವರು ಎಂಐ-17 ಹೆಲಿಕಾಪ್ಟರ್‌ನಿಂದ ಜಿಗಿದ ಮೊದಲ ಮಹಿಳಾ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾದರು. ಕ್ಯಾಪ್ಟನ್ ಕಿರಣ್ ಅಶ್ರಫ್ ಅವರನ್ನು ಅತ್ಯುತ್ತಮ ಪ್ಯಾರಾಟ್ರೂಪರ್ ಎಂದು ಘೋಷಿಸಲಾಯಿತು.

ಜಿಮ್ಮರ್‌ಮನ್ ಖುಲಾಸೆಗೆ ಆಕ್ರೋಶ
ವಾಷಿಂಗ್ಟನ್ (ಎಪಿ):
ಕಳೆದ ವರ್ಷ ಫ್ಲಾರಿಡಾದಲ್ಲಿ ಆಫ್ರಿಕಾ ಮೂಲದ ಅಮೆರಿಕದ ವಿದ್ಯಾರ್ಥಿ ಮಾರ್ಟಿನ್ ಎಂಬಾತನನ್ನು ಗುಂಡಿಟ್ಟು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಜಿಮ್ಮರ್‌ಮನ್‌ನನ್ನು ಖುಲಾಸೆಗೊಳಿಸಿರುವುದಕ್ಕೆ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ನ್ಯೂಯಾರ್ಕ್‌ನ ನಗರದಲ್ಲಿ ಭಾನುವಾರ ರಾತ್ರಿ ನೂರಾರು ಮಂದಿ ಟೈಮ್ಸ ಸ್ಕ್ವೇರ್‌ನಲ್ಲಿ ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT