ನ್ಯೂಯಾರ್ಕ್ (ಪಿಟಿಐ): ಇದೀಗ ಜೀವಂತ ಜಿರಲೆಯ ಚಲನೆಯನ್ನೂ ಮೊಬೈಲ್‌ನಿಂದಲೇ ನಿಯಂತ್ರಿಸಬಹುದಾಗಿದೆ! -ಹೌದು, ಮಿಷಿಗನ್‌ನ `ಬ್ಯಾಕ್‌ಯಾರ್ಡ್ ಬ್ರೈನ್ಸ್' ಎಂಬ ಶೈಕ್ಷಣಿಕ ಸಂಶೋಧಕರ ಗುಂಪು `ರೋಬೊರೋಚ್' ಎಂಬ ಯೋಜನೆಯಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ.
ಜಿರಲೆಗಳು ತಮ್ಮ ಹೊರಚಾಚಿದ ಮೀಸೆಗಿರುವ ಕಂಪನ ಗ್ರಹಿಕೆಯ ಸಾಮರ್ಥ್ಯವನ್ನೇ ಆಧರಿಸಿ ಚಲಿಸುತ್ತದೆಂಬುದು ಈಗಾಗಲೇ ಗೊತ್ತಿರುವ ವಿಷಯ; ಕಂಪನಗಳ ತೀವ್ರತೆಯ ಆಧಾರದ ಮೇಲೆಯೇ ಎಲ್ಲೆ ತಡೆಗಡೆಗಳಿವೆ, ಎಲ್ಲಿ ಸರಾಗ ಮಾರ್ಗವಿದೆ ಎಂಬುದನ್ನು ಅದು ತಿಳಿಯಬಲ್ಲದು. ಅದನ್ನೇ ಆಧರಿಸಿ ಈ ತಂತ್ರಜ್ಞಾನವನ್ನು ಸಾಧಿಸಲಾಗಿದೆ!
ಇದಕ್ಕಾಗಿ ಮಾಡಬೇಕಿರುವುದು ಇಷ್ಟು- ಮೊದಲ ಹಂತದಲ್ಲಿ, ಶಸ್ತ್ರಚಿಕಿತ್ಸೆಯ ನೆರವಿನಿಂದ ಜಿರಲೆಯ ಮೀಸೆಯೊಳಕ್ಕೆ ಒಂದು ಸೂಕ್ಷ್ಮ ವಿದ್ಯುತ್ ಕಂಪನ ಉದ್ದೀಪಕವನ್ನು (ಸ್ಟಿಮುಲೇಟರ್) ಅಳವಡಿಸಲಾಗುತ್ತದೆ. ಇದಕ್ಕಾಗಿ ಜಿರಲೆಯ ಆರು ಕಾಲುಗಳಲ್ಲಿ ಒಂದು ಕಾಲನ್ನು ಕತ್ತರಿಸುವುದು ಅನಿವಾರ್ಯ.
ಈ ಶಸ್ತ್ರಚಿಕಿತ್ಸೆಯ ಬಳಲಿಕೆಯಿಂದ ಜಿರಲೆ ಚೇತರಿಸಿಕೊಂಡ ಮೇಲೆ ಅದರ ಬೆನ್ನಿನ ಮೇಲೆ ಒಂದು `ಬ್ಯಾಕ್‌ಪ್ಯಾಕ್' ಸಾಧನ ಕೂರಿಸಲಾಗುತ್ತದೆ. ಮೀಸೆಯೊಳಕ್ಕೆ ತೂರಿಸಲಾದ ವಿದ್ಯುತ್ ಸ್ಟಿಮುಲೇಟರ್ ಹಾಗೂ ನಿಯಂತ್ರಕ ಮಾಧ್ಯಮ (ಕಂಟ್ರೋಲ್ ಇಂಟರ್‌ಫೇಸ್), ಅಂದರೆ, ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕ ಕಲ್ಪಿಸುವುದು ಈ `ಬ್ಯಾಕ್‌ಪ್ಯಾಕ್'ನ ಕೆಲಸವಾಗಿದೆ.
ಇಷ್ಟಾದ ಮೇಲೆ, ಮೊಬೈಲ್ ಪರದೆಯ ಮೇಲೆ ಸಂಬಂಧಿಸಿದ ಆನ್ವಯಿಕವನ್ನು (ಅಪ್ಲಿಕೇಷನ್) ತೆಗೆದು, ಬೆರಳನ್ನು ಯಾವ ಕಡೆಗೆ ಎಳೆಯುತ್ತೀರೋ ಆ ಕಡೆಗೆ ಜೀವಂತ ಜಿರಲೆ ಚಲಿಸತೊಡಗುತ್ತದೆ. ಬೆರಳನ್ನು ಎಡಗಡೆಗೆ ಎಳೆದರೆ ಜಿರಲೆ ಅತ್ತಕತಡೆಗೂ, ಬಲಭಾಗದೆಡೆಗೆ ಎಳೆದರೆ ಇತ್ತಕಡೆಗೂ ಮುಖ ಮಾಡುತ್ತದೆ!
ಕೈ ಬೈರಳು ಮೊಬೈಲ್ ಪರದೆಯನ್ನು ಸ್ಪರ್ಶಿಸುತ್ತಿದ್ದಂತೆಯೇ ಸಂಬಂಧಿಸಿದ ವಿದ್ಯುತ್ ಕಂಪನಗಳು ಜಿರಲೆಯ ಮೀಸೆಯೊಳಗಿನ ವಿದ್ಯುತ್ ಸ್ಟಿಮುಲೇಟರ್ ಮೂಲಕ ಪ್ರವಹಿಸುತ್ತವೆ. ಈ ಕಂಪನಗಳು ಜಿರಲೆಯ ಮಿದುಳು ತಲುಪಿ, ಸಂದೇಶ ರವಾನಿಸುತ್ತವೆ. ಜಿರಲೆಯು ರವಾನೆಯಾದ ಸಂದೇಶಕ್ಕೆ ತಕ್ಕಂತೆ ವರ್ತಿಸತೊಡಗುತ್ತದೆ.
ಜಿರಲೆಗೆ ಶಸ್ತ್ರಚಿಕಿತ್ಸೆಗೆ ಮುನ್ನ ಅರಿವಳಿಕೆ ನೀಡಲಾಗುತ್ತದೆ. ಜಿರಲೆಯ ಮೀಸೆಯ ಮೂಲಕ ವಿದ್ಯುತ್ ಕಂಪನಗಳು ಪ್ರವಹಿಸಿದಾಗ ಅವುಗಳಿಗೆ ನೋವಾಗಲೀ ಅಥವಾ ಭಯ ಆಗುವುದಾಗಲೀ ಕಂಡುಬಂದಿಲ್ಲ. ಹೀಗಾಗಿ ಈ ಪ್ರಯೋಗದ ವೇಳೆ ಜಿರಲೆಗೆ ಯಾವ ಯಾತನೆಯೂ ಆಗುವುದಿಲ್ಲ ಎಂದೂ ಸಂಶೋಧಕರ ತಂಡ ಹೇಳಿಕೊಂಡಿದೆ.
ಈ ಕಂಪನಗಳ ತೀವ್ರತೆ ಎಷ್ಟು ಕಡಿಮೆ ಇರುತ್ತದೆಂದರೆ ಕೆಲವೇ ನಿಮಿಷಗಳಾಗುತ್ತಿದ್ದಂತೆ ಈ ಕಂಪನಗಳಿಗೆ ಜಿರಲೆಯು ಸ್ಪಂದಿಸುವುದನ್ನೇ ನಿಲ್ಲಿಸಿಬಿಡುತ್ತದೆ. ಹಾಗಾದಾಗ, ಕಂಪನಾಂಕವನ್ನು ಬದಲಿಸಿಕೊಂಡರೆ ಮತ್ತೆ ಅದು ಪ್ರತಿಸ್ಪಂದಿಸಲು ಶುರು ಮಾಡುತ್ತದೆ ಎಂದು ವಿವರಿಸಿದ್ದಾರೆ.
ಈ `ರೋಬೋರೋಚ್' ಅಭಿವೃದ್ಧಿ ನರಸಂಬಂಧಿ ಪ್ರಯೋಗಗಳಿಗೆ ಸಾಕಷ್ಟು ನೆರವಾಗಲಿದೆ ಎಂಬುದು ತಜ್ಞರ ಆಶಾಭಾವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.