ADVERTISEMENT

`ಜಿ 8' ರಾಷ್ಟ್ರಗಳ ಐತಿಹಾಸಿಕ ಒಪ್ಪಂದ

ಯುದ್ಧದ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ಲಂಡನ್ (ಪಿಟಿಐ): ಯುದ್ಧದ ಸಂದರ್ಭಗಳಲ್ಲಿ ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಅಸ್ತ್ರವನ್ನಾಗಿ ಬಳಸುವುದಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಜಗತ್ತಿನ ಎಂಟು ಬಲಿಷ್ಠ ರಾಷ್ಟ್ರಗಳು `ಐತಿಹಾಸಿಕ' ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಇದಕ್ಕಾಗಿ ನಿಧಿಯನ್ನೂ ಹುಟ್ಟುಹಾಕಿವೆ.

ಹಾಲಿವುಡ್ ನಟಿ ಹಾಗೂ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಏಂಜಲಿನಾ ಜೋಲಿ ಈ ಒಪ್ಪಂದವನ್ನು ಶ್ಲಾಘಿಸಿದ್ದಾರೆ.

ಲಂಡನ್ನಿನ ಲಂಕಸ್ಟರ್ ಭವನದಲ್ಲಿ  ನಡೆಯುತ್ತಿರುವ `ಜಿ8' ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಅಂತರರಾಷ್ಟ್ರೀಯ ಒಪ್ಪಂದ ಏರ್ಪಟ್ಟಿದೆ.

ಸಮರ ವಲಯಗಳಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ 3.54 ಕೋಟಿ ಡಾಲರ್ ರೂ.197.7 ಕೋಟಿ) ಮೊತ್ತದ ನಿಧಿ ಸ್ಥಾಪನೆ  ನಿರ್ಣಯದ ಘೋಷಣೆಯನ್ನು ಬ್ರಿಟನ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಲಿಯಂ ಹೇಗ್ ಮಾಡಿದರು. ಏಂಜಲಿನಾ ಜೋಲಿ ಕೂಡ ಈ ಘೋಷಣೆಗೆ ದನಿಗೂಡಿಸಿದರು.

`ಯುದ್ಧದ ಸಂದರ್ಭಗಳಲ್ಲಿ ಸಾವಿರಾರು ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗುತ್ತಿದೆ. ಹಿಂಸಿಸಿ ಅಥವಾ ಬಲಾತ್ಕಾರವಾಗಿ ಗುಲಾಮಗಿರಿಗೆ ತಳ್ಳಲಾಗುತ್ತಿದೆ' ಎಂದು ನಿರಾಶ್ರಿತರ ವಿಷಯಗಳ ಕುರಿತಾಗಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ ಹೇಳಿದರು.

`ಪ್ರತಿ  ಬಾರಿಯೂ ಇದನ್ನು ತಡೆಯಲು ಅಥವಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಗತ್ತು ವಿಫಲವಾಗಿದೆ. ಆದರೆ ಇಂದು ಆ ಮಹಿಳೆಯರ  ಕೂಗನ್ನು ಆಲಿಸಲಾಗಿದೆ ಎಂದು ನನಗೆ ಅನ್ನಿಸುತ್ತಿದೆ. ಅಂತಿಮವಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಬಂದಿದೆ' ಎಂದು ನಿರ್ಣಯವನ್ನು ಶ್ಲಾಘಿಸುತ್ತಾ ಜೋಲಿ ಹೇಳಿದರು.

ಇದೇ ಒಪ್ಪಂದದ ಭಾಗವಾಗಿ,  ಯುದ್ಧ ಸಂದರ್ಭದ ದೌರ್ಜನ್ಯ ಹತ್ತಿಕ್ಕುವಿಕೆ, ಅವುಗಳ ತನಿಖೆ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಜಗತ್ತಿಗೆ ತಿಳಿ ಹೇಳಲು ಒಟ್ಟು 3.54 ಕೋಟಿ ಡಾಲರ್ ಮೊತ್ತದ ನಿಧಿ ಸ್ಥಾಪಿಸುವುದಕ್ಕೂ ಜಗತ್ತಿನ ಶಕ್ತಿಶಾಲಿ ಎಂಟು ರಾಷ್ಟ್ರಗಳು ಮುಂದಾಗಿವೆ.

ಈ ಉದ್ದೇಶಕ್ಕಾಗಿ ಬ್ರಿಟನ್ 1ಕೋಟಿ ಪೌಂಡ್ (ಸುಮಾರು ರೂ.85 ಕೋಟಿ) ಮೊತ್ತವನ್ನು ತನ್ನ ವಿದೇಶಾಂಗ ಇಲಾಖೆ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಇಲಾಖೆಯ ಬಜೆಟ್‌ನಲ್ಲಿ ಮೀಸಲಿಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.