ADVERTISEMENT

ಜೀವ ವಿಕಾಸದ ಗುಟ್ಟು ರಟ್ಟು!

ಪಾಚಿಯ ಬೆಳವಣಿಗೆಯಿಂದ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿ

ಪಿಟಿಐ
Published 17 ಆಗಸ್ಟ್ 2017, 19:30 IST
Last Updated 17 ಆಗಸ್ಟ್ 2017, 19:30 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಮೆಲ್ಬರ್ನ್: ಭೂಮಿಯ ಮೇಲೆ ಪ್ರಥಮ ಬಾರಿಗೆ ಜೀವಿಯೊಂದು ಸೃಷ್ಟಿಯಾಗಿದ್ದು ಹೇಗೆ? ಈ ರಹಸ್ಯವನ್ನು ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎಎನ್‌ಯು) ಸಂಶೋಧಕರು ಭೇದಿಸಿದ್ದಾರೆ.

ಮಧ್ಯ ಆಸ್ಟ್ರೇಲಿಯಾದಲ್ಲಿ ಸಿಕ್ಕಿದ ಹಿಮಯುಗ ನಂತರದ ಕಲ್ಲುಗಳನ್ನು ಪುಡಿ ಮಾಡಿ ಅಧ್ಯಯನ ನಡೆಸಲಾಗಿದೆ. ಅದರ ಪ್ರಕಾರ, 65 ಕೋಟಿ ವರ್ಷಗಳ ಹಿಂದೆ ಪಾಚಿ ಉತ್ಪತ್ತಿ ಆದ ಅವಧಿಯಲ್ಲೇ ಜೀವಿಗಳ ವಿಕಸನ ಪ್ರಕ್ರಿಯೆಯೂ ಆರಂಭವಾಗಿದೆ.

‘ಭೂಮಿಯ ಇತಿಹಾಸದಲ್ಲಿ, ಮನುಷ್ಯ ಅಥವಾ ಪ್ರಾಣಿಗಳ ಅಸ್ತಿತ್ವವೇ ಇಲ್ಲದಿದ್ದಾಗ ಪಾಚಿಯ ಬೆಳವಣಿಗೆ ಆಗಿದೆ. ಇದು ಪರಿಸರ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ಎಂದು ಈ ಪ್ರಾಚೀನ ಕಲ್ಲುಗಳು ನಮಗೆ ತಿಳಿಸಿವೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಷೆನ್ ಬ್ರೊಕ್ಸ್ ಹೇಳಿದ್ದಾರೆ.

‘ಪಾಚಿ ಉತ್ಪತ್ತಿಗೂ ಹಿಂದಿನ ಐದು ಕೋಟಿ ವರ್ಷಗಳಲ್ಲಿ, ಅಂದರೆ ಹಿಮಯುಗದಲ್ಲಿ ನಾಟಕೀಯ ಬೆಳವಣಿಗೆಯೇ ಆಗಿದೆ. ಅತಿಯಾದ ಉಷ್ಣಾಂಶದ ಕಾರಣ ಹಿಮವು ಕರಗಿ ನದಿಗಳಾಗಿ ಹರಿಯಿತು. ಈ ನದಿಗಳು ಪೋಷಕಾಂಶಗಳನ್ನು ಸಾಗರಕ್ಕೆ ಹೊತ್ತು ತಂದವು. ಸಾಗರದ ನೀರಿನಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚಿ, ತಾಪಮಾನವೂ ಕಡಿಮೆ ಆದಾಗ ಪಾಚಿಯ ಉತ್ಪತ್ತಿಗೆ ಸೂಕ್ತ ಕಾಲಾವಕಾಶ ಕೂಡಿ ಬಂತು.

ಆಗ, ಬ್ಯಾಕ್ಟೀರಿಯಾಗಳೇ ಹೆಚ್ಚಾಗಿರುವ, ಸಾಗರದಲ್ಲಿರುವ ಕಣಗಳು ಭೂಮಿಗೆ ಸ್ಥಳಾಂತರಗೊಂಡವು. ಇದರಿಂದಾಗಿ ಜೀವ ವಿಕಾಸಕ್ಕೆ ಅಗತ್ಯವಿರುವ ಶಕ್ತಿಯು ಆಹಾರ ಜಾಲದಲ್ಲಿ ಹರಡಿಕೊಂಡಿತು. ಪರಿಣಾಮವಾಗಿ ಭೂಮಿಯ ಮೇಲೆ ಮಾನವನನ್ನೂ ಒಳಗೊಂಡು ಬೃಹತ್ ಮತ್ತು ಸಂಕೀರ್ಣ ಜೀವಿಗಳು ಸೃಷ್ಟಿಯಾದವು’ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಅಧ್ಯಯನದ ವರದಿಯು ’ನೇಚರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT