ADVERTISEMENT

ಜೆಸಿಂತಾ ಸಾವು: ಎಲ್ಲೆಡೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 5:46 IST
Last Updated 10 ಡಿಸೆಂಬರ್ 2012, 5:46 IST
ಜೆಸಿಂತಾ ಸಾವು: ಎಲ್ಲೆಡೆ ಆಕ್ರೋಶ
ಜೆಸಿಂತಾ ಸಾವು: ಎಲ್ಲೆಡೆ ಆಕ್ರೋಶ   

ಲಂಡನ್/ ಮೆಲ್ಬರ್ನ್ (ಪಿಟಿಐ):  ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನ ಅವರ ಸಾವಿಗೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಪ್ರಕರಣವನ್ನು ಖಂಡಿಸಿ ಅಸಂಖ್ಯ ಸಂದೇಶಗಳು ಹರಿದಾಡುತ್ತಿವೆ.  ಜೆಸಿಂತಾ ಅವರು ಕಾರ್ಯನಿರ್ವಹಿಸುತ್ತಿದ್ದ ಕಿಂಗ್ ಎಡ್ವರ್ಡ್-7 ಆಸ್ಪತ್ರೆಗೆ ಹುಸಿ ಕರೆ ಮಾಡಿದ್ದ ಆಸ್ಟ್ರೇಲಿಯಾದ `2ಡೇ ಎಫ್‌ಎಂ' ನಿರೂಪಕರಾದ ಮೆಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ಅವರನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವಂತಹ ಸಂದೇಶಗಳು ಪ್ರಕಟವಾಗಿವೆ.

ಈ ಮಧ್ಯೆ, ಇಬ್ಬರೂ ಡಿಜೆಗಳು ಅನಿರ್ದಿಷ್ಟಾವಧಿ ರಜೆ ತೆಗೆದುಕೊಂಡು ಭೂಗತರಾಗಿದ್ದಾರೆ. ಜೆಸಿಂತಾ ಸಾವಿನ ಹಿಂದೆ ಡಿಜೆಗಳು ಮಾಡಿದ ಹುಸಿ ಕರೆಯ ಪಾತ್ರ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಬ್ಬರ ಮಾನಸಿಕ ಸ್ಥಿತಿ ದುರ್ಬಲಗೊಂಡಿದ್ದು, ಕೌನ್ಸೆಲಿಂಗ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ.ರೇಡಿಯೊ ಮಾಲೀಕ ಸಂಸ್ಥೆ ಸದರ್ನ್ ಕ್ರಾಸ್ ಆಸ್ಟಿರಿಯೊ ಕೂಡ ತನ್ನ ಇಬ್ಬರು ಸಿಬ್ಬಂದಿಯ ಮಾನಸಿಕ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ನಡುವೆ, ಜೆಸಿಂತಾ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆ ಅಧ್ಯಕ್ಷ ಲಾರ್ಡ್ ಸಿಮನ್ ಗ್ಲೆನಾರ್ಥುರ್, ಸದರ್ನ್ ಕ್ರಾಸ್ ಆಸ್ಟಿರಿಯೊ ಅಧ್ಯಕ್ಷ ಮ್ಯಾಕ್ಸ್ ಮೂರೆ-ವಿಲ್ಟನ್ ಅವರಿಗೆ ಪತ್ರ ಬರೆದು ಡಿಜೆಗಳ ವರ್ತನೆ ಖಂಡಿಸಿದ್ದಾರೆ.

ಜೆಸಿಂತಾ ಸಾವು: ಎಲ್ಲೆಡೆ ಆಕ್ರೋಶ
`ಕಿಂಗ್ ಎಡ್ವರ್ಡ್-7 ಆಸ್ಪತ್ರೆ ರೋಗಿಗಳ ಆರೈಕೆ ಮಾಡುತ್ತದೆ. ನಮ್ಮ ರೋಗಿಯೊಬ್ಬರ ಮಾಹಿತಿ ಪಡೆಯಲು ನಿಮ್ಮ ರೇಡಿಯೊ ನಿರೂಪಕರು ಸುಳ್ಳು ಹೇಳಲು ಯತ್ನಿಸಿರುವುದು ಮೂರ್ಖತನ' ಎಂದು ಪತ್ರದಲ್ಲಿ ಗ್ಲೆನಾರ್ಥುರ್ ಬರೆದಿದ್ದಾರೆ.

ಸಾವಿಗೆ ಕಾರಣ ತಿಳಿದಿಲ್ಲ: ಜೆಸಿಂತಾ ಸಾವಿನ ಹಿಂದಿನ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇದನ್ನು ನಿಗೂಢ ಸಾವಿನ ಪ್ರಕರಣ ಎಂದು ಪೊಲೀಸರು ಪರಿಗಣಿಸಿಲ್ಲ. ಜೆಸಿಂತಾ ಶವದ ಮಹಜರು ಸೋಮವಾರ ನಡೆಯಲಿದ್ದು ಮರಣೋತ್ತರ ಪರೀಕ್ಷೆ ಈ ವಾರದಲ್ಲಿ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾ ಪೊಲೀಸರನ್ನು ಸಂಪರ್ಕಿಸಿದ ಸ್ಕಾಂಟ್ಲೆಂಡ್ ಯಾರ್ಡ್ ಪೊಲೀಸ್: ಹುಸಿ ಕರೆ ಮಾಡಿದ ಇಬ್ಬರು ಡಿಜೆಗಳ ವಿಚಾರಣೆ ಮಾಡುವ ಸಂಬಂಧ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಆಸ್ಟ್ರೇಲಿಯಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಜೆಸಿಂತಾ ಸಾವಿಗೆ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಆಘಾತ ವ್ಯಕ್ತಪಡಿಸಿದ್ದಾರೆ.

ಶಿರ್ವದಲ್ಲಿ ಅಂತ್ಯಸಂಸ್ಕಾರ: ಜೆಸಿಂತಾ ಸಾವಿನ ಆಘಾತದಿಂದ ಅವರ ಕುಟುಂಬ ಇನ್ನೂ ಹೊರ ಬಂದಿಲ್ಲ. ಜೆಸಿಂತಾ ಪುತ್ರ 16 ವರ್ಷದ ಜುನಾಲ್ ಮತ್ತು 14 ವರ್ಷದ ಲಿಶಾ ಆಘಾತಕ್ಕೆ ಒಳಗಾಗಿದ್ದಾರೆ. `ದುರಂತಮಯ ಸನ್ನಿವೇಶದಲ್ಲಿ ನನ್ನ ಪತ್ನಿಯನ್ನು ಕಳೆದುಕೊಂಡು ನಾನು ದುಃಖಕ್ಕೆ ಒಳಗಾಗಿದ್ದೇನೆ. ಅವಳ ಅಂತ್ಯ ಸಂಸ್ಕಾರ ಶಿರ್ವದಲ್ಲೇ ನಡೆಯಲಿದೆ' ಎಂದು ಜೆಸಿಂತಾ ಪತಿ 49 ವರ್ಷದ ಬೆನಿಡಿಕ್ಟ್ ಶನಿವಾರ ಸಾಮಾಜಿಕ ಜಾಲತಾಣವೊಂದರಲ್ಲಿ ಬರೆದಿದ್ದಾರೆ.

ನಿಯಮ ಉಲ್ಲಂಘನೆ?
ಆಸ್ಪತ್ರೆಗೆ ಹುಸಿ ಕರೆ ಬಂದ ಪ್ರಕರಣದಲ್ಲಿ ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರಮನೆಯ ಮೂಲಗಳು ಹೇಳಿವೆ. ನಿಯಮಗಳ ಪ್ರಕಾರ, ರಾತ್ರಿ ವೇಳೆ ಸ್ವಾಗತ ಕೌಂಟರ್‌ಗೆ ಬರುವ ಯಾವುದೇ ದೂರವಾಣಿ ಕರೆಗಳನ್ನು ನರ್ಸ್‌ಗಳು ವರ್ಗಾವಣೆ ಮಾಡುವಂತಿಲ್ಲ. ಕರೆಯ ಸಂದೇಶಗಳನ್ನು ಮಾತ್ರ ಇತರರಿಗೆ ರವಾನಿಸಬಹುದು.

ಆದರೆ, ಈ ಪ್ರಕರಣದಲ್ಲಿ ನಿಯಮಗಳ ಉಲ್ಲಂಘನೆಗೆ ಆಸ್ಪತ್ರೆಯನ್ನು ದೂಷಿಸಲಾಗಿಲ್ಲ. `ಯಾವಾಗಲೂ ನಿಯಮಗಳ ಪ್ರಕಾರವೇ ಆಸ್ಪತ್ರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ದುರದೃಷ್ಟವಶಾತ್ ನಿಯಮದ ಪಾಲನೆಯಾಗಿಲ್ಲ' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.