ADVERTISEMENT

ಟಿರೊಲ್‌ಗೆ ಅರ್ಥಶಾಸ್ತ್ರದ ನೊಬೆಲ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2014, 19:30 IST
Last Updated 13 ಅಕ್ಟೋಬರ್ 2014, 19:30 IST
ಜೀನ್‌ ಟಿರೊಲ್‌
ಜೀನ್‌ ಟಿರೊಲ್‌   

ಸ್ಟಾಕ್‌ಹೋಮ್‌ (ಎಪಿ): ಮಾರುಕಟ್ಟೆ ಶಕ್ತಿ- ಸಾಮರ್ಥ್ಯ ಮತ್ತು ನಿಯಂತ್ರಣ ಕುರಿತು ಕೈಗೊಂಡ ಸಂಶೋಧನೆಗಾಗಿ ಫ್ರಾನ್ಸ್‌ನ ಜೀನ್‌ ಟಿರೊಲ್‌ ಅವರು ಈ ಬಾರಿಯ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಕೆಲವೇ ಕೆಲವು ಸಂಸ್ಥೆಗಳು ಉದ್ದಿಮೆಗಳ ಮೇಲೆ ಹೊಂದಿರುವ ನಿಯಂತ್ರಣವನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಫ್ರಾನ್ಸ್‌ನ ‘ತೌಲೋಸ್ ಸ್ಕೂಲ್ ಆಫ್‌ ಎಕನಾಮಿಕ್ಸ್‌’ನಲ್ಲಿ ಕಾರ್ಯನಿರ್ವ­ಹಿಸುತ್ತಿರುವ 61 ವರ್ಷದ ಜೀನ್‌ ಅವರು ವಿಶದಪಡಿಸಿದ್ದಾರೆ ಎಂದು ನೊಬೆಲ್‌ ಪ್ರಶಸ್ತಿ ಪ್ರತಿಷ್ಠಾನವಾದ ಸ್ವೀಡನ್‌ನ ರಾಯಲ್‌  ಅಕಾಡೆಮಿ ಹೇಳಿದೆ.

ಅರ್ಥಶಾಸ್ತ್ರದಲ್ಲಿನ ಪ್ರಶಸ್ತಿ ಘೋಷಣೆ­ಯೊಂದಿಗೆ 2014ನೇ ಸಾಲಿನ ನೊಬೆಲ್‌ ಪ್ರಶಸ್ತಿ­ಗಳ ಘೋಷಣೆ ಪ್ರಕ್ರಿಯೆ ಮುಕ್ತಾ­ಯ­­ವಾಗಿದ್ದು, ಡಿಸೆಂಬರ್‌ 10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

1980ರ ಮಧ್ಯಭಾಗ ಮತ್ತು ಆ ನಂತರದ ದಿನಗಳಲ್ಲಿ ಮಾರುಕಟ್ಟೆ ವೈಫಲ್ಯ ಕುರಿತ ಸಂಶೋಧನೆಗೆ ಹೊಸ ತಿರುವು ನೀಡುವ ಮೂಲಕ ಜೀನ್‌ ಅವರು ಗಮನಸೆಳೆದರು.
ಕೆಲವು ಪ್ರಭಾವಿ ಶಕ್ತಿಗಳ ಹಿಡಿತದಿಂದ ಮಾರುಕಟ್ಟೆಯನ್ನು ಹೇಗೆ ಮುಕ್ತಗೊಳಿಸಬೇಕು ಎಂಬ ಬಗ್ಗೆ ಅವರು ನೀಡಿದ್ದ ಸಲಹೆಗಳಿಂದ ನೀತಿಗಳನ್ನು ರೂಪಿಸಲು ಸಹಕಾರಿಯಾಯಿತು.
ಸರ್ಕಾರ ವಾಣಿಜ್ಯ ಒಕ್ಕೂಟಗಳೊಂದಿಗೆ ಹೇಗೆ ವ್ಯವಹರಿಸಬೇಕು ಮತ್ತು ಅವುಗಳ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎಂಬ ವಿಷಯದ ಬಗ್ಗೆ ಅವರು ಬೆಳಕು ಚೆಲ್ಲಿದ್ದರು.

ಈ ಬಗ್ಗೆ ನಿಯಮಿತವಾಗಿ ಲೇಖನಗಳು, ಪುಸ್ತಕಗಳನ್ನು ಅವರು ಬರೆದಿದ್ದಾರೆ. ಇದರಿಂದ ದೂರ ಸಂಪರ್ಕ, ಬ್ಯಾಂಕಿಂಗ್‌, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಲು ಸಹಕಾರಿಯಾಯಿತು ಎಂದು ಅಕಾಡೆಮಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.