ADVERTISEMENT

ಟ್ರಯಂಫ್‌ ಕ್ಷಿಪಣಿ ಮಾರಾಟಕ್ಕೆ ರಷ್ಯಾ ಒಪ್ಪಿಗೆ

ಪಿಟಿಐ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ಟ್ರಯಂಫ್‌ ಕ್ಷಿಪಣಿ ಮಾರಾಟಕ್ಕೆ ರಷ್ಯಾ ಒಪ್ಪಿಗೆ
ಟ್ರಯಂಫ್‌ ಕ್ಷಿಪಣಿ ಮಾರಾಟಕ್ಕೆ ರಷ್ಯಾ ಒಪ್ಪಿಗೆ   

ಸೇಂಟ್‌ ಪೀಟರ್ಸ್‌ಬರ್ಗ್‌ : ವಿಮಾನಗಳನ್ನು ಹೊಡೆದುರುಳಿಸಬಲ್ಲ ಎಸ್‌–400 ಟ್ರಯಂಫ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ರಷ್ಯಾ ಒಪ್ಪಿಗೆ ನೀಡಿದ್ದು ಮಾರಾಟದ ನಿಯಮಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ಒಪ್ಪಂದಕ್ಕೆ ಸಹಿ ಮಾಡುವುದಕ್ಕೆ ಮುಂಚಿನ ಸಿದ್ಧತೆಗಳು ಆರಂಭ ಆಗಿವೆ. ಕ್ಷಿಪಣಿ ವ್ಯವಸ್ಥೆಯನ್ನು ಯಾವಾಗ ಪೂರೈಸಬಹುದು ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ ಎಂದು ರಷ್ಯಾದ ಉಪಪ್ರಧಾನಿ ಡಿಮಿತ್ರಿ ರೊಗೊಜಿನ್‌ ಹೇಳಿದ್ದಾರೆ.

ಟ್ರಯಂಫ್ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಲಾಗುವುದು ಮತ್ತು ಕಮೊವ್‌ ಹೆಲಿಕಾಪ್ಟರ್‌ ತಯಾರಿಕಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಕಳೆದ ಅಕ್ಟೋಬರ್‌ 15ರಂದು ಭಾರತ ಪ್ರಕಟಿಸಿತ್ತು.

ADVERTISEMENT

ಗೋವಾದಲ್ಲಿ ನಡೆದ ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಗುಂಪು) ಸಮಾವೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಚರ್ಚೆ ನಡೆಸಿದ್ದರು.

ಆದರೆ ಈ ಒಪ್ಪಂದ ಅಂತಿಮ ಆಗಿಲ್ಲ ಎಂದು ಕ್ಷಿಪಣಿ ವ್ಯವಸ್ಥೆಯನ್ನು ತಯಾರಿಸುವ ರೋಸ್ಟೆಕ್‌ ಕಾರ್ಪೊರೇಷನ್‌ನ ಮಹಾ ನಿರ್ದೇ ಶಕ ಸೆರ್ಗೆಯಿ ಕೆಮೆಜೋವ್‌ ಏಪ್ರಿಲ್‌ನಲ್ಲಿ ಹೇಳಿದ್ದರು.

ಈ ವ್ಯವಸ್ಥೆಯ ವೈಶಿಷ್ಟ್ಯ...

* ಇದು ರಷ್ಯಾ ತಯಾರಿಸಿರುವ ಅತ್ಯಾಧುನಿಕ ವಿಮಾನ ಹೊಡೆದುರುಳಿಸಬಲ್ಲ ಕ್ಷಿಪಣಿ ವ್ಯವಸ್ಥೆ
* ಸ್ಥಳದಿಂದ ಸ್ಥಳಕ್ಕೆ ಒಯ್ಯುವುದು ಸುಲಭ
* ವಿಮಾನ, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ
* ಮೂರು ಹಂತದ ಭದ್ರತಾ ವ್ಯವಸ್ಥೆ ಒದಗಿಸುತ್ತದೆ
* ಮೂರು ರೀತಿಯ ಕ್ಷಿಪಣಿ ಹಾರಿಸುವ ಶಕ್ತಿ ಹೊಂದಿದೆ
* ಏಕಕಾಲದಲ್ಲಿ 36 ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ ಇದೆ
* 400 ಕಿ.ಮೀ ದೂರದಿಂದಲೇ ವಿಮಾನ ಹೊಡೆದುರುಳಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.