ADVERTISEMENT

ಡಾ. ಮುರ್ರೆ ತಪ್ಪೊಪ್ಪಿಗೆ : ಜಾಕ್ಸನ್‌ಗೆ ಮಾರಕ ಮದ್ದು ನೀಡಿದ್ದು ನಿಜ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಲಾಸ್ ಏಂಜಲೀಸ್, (ಪಿಟಿಐ): ಪಾಪ್ ಸಂಗೀತ ಲೋಕದ ಅನಭಿಷಿಕ್ತ ದೊರೆ ಮೈಕಲ್ ಜಾಕ್ಸನ್ ನಿಗೂಢ ಸಾವಿಗೆ ಕಾರಣರಾಗಿದ್ದಾರೆ ಎಂದು ಶಂಕಿಸಲಾಗಿದ್ದ ಅವರ ಕುಟುಂಬ ವೈದ್ಯ ಡಾ. ಕಾನ್‌ರ‌್ಯಾಡ್ ಮುರ‌್ರೆ, ಮೈಕಲ್ ಜೀವಕ್ಕೆ ಮಾರಕವಾದ ಮದ್ದನ್ನು ತಾವೇ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಜಾಕ್ಸನ್ ಸಾವಿನ ಎರಡು ದಿನಗಳ ನಂತರ ನಡೆದ ಪೊಲೀಸ್ ವಿಚಾರಣೆ ವೇಳೆ ಮುರ‌್ರೆ ನೀಡಿರುವ ಧ್ವನಿಮುದ್ರಿತ ತಪ್ಪೊಪ್ಪಿಗೆ ಹೇಳಿಕೆಯನ್ನು ಶುಕ್ರವಾರ ನ್ಯಾಯಾಲಯದಲ್ಲಿ ಕೇಳಿಸಲಾಯಿತು. ಅವರಿಗೆ ನೀಡಲಾದ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ಡಾ. ಮುರ‌್ರೆ ಇದರಲ್ಲಿ ವಿವರಿಸಿದ್ದಾರೆ.

ನಿದ್ರಾಹೀನತೆಯಿಂದ ಬಳಲುತ್ತಿದ್ದ ಪಾಪ್ ತಾರೆಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ವೇಳೆ ನೀಡಲಾಗುವ `ಪ್ರೊಪೊಫಾಲ್~ ಎಂಬ ಶಕ್ತಿಯುತ ಅರಿವಳಿಕೆ ಮದ್ದನ್ನು ನೀಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ನಿದ್ರೆಗಾಗಿ ತಾವು ನೀಡುತ್ತಿದ್ದ `ಪ್ರೊಪೊಫಾಲ್~ ಸೇರಿದಂತೆ ಇತರ ಔಷಧಗಳನ್ನು ಜಾಕ್ಸನ್ `ಹಾಲು~ ಎಂದೇ ಕರೆಯುತ್ತಿದ್ದರು ಎಂಬುದನ್ನೂ ಅವರು ಇದೇ ವೇಳೆ ಬಹಿರಂಗ ಪಡಿಸಿದ್ದಾರೆ. ಆದರೆ, ಸಾವು ಸಂಭವಿಸುವಷ್ಟು ಪ್ರಮಾಣದ ಔಷಧವನ್ನು ತಾವು ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೈದ್ಯರು ಮದ್ದು ನೀಡಿ ತೆರಳಿದ ನಂತರ ಜಾಕ್ಸನ್ ಜೀವಕ್ಕೆ ಮಾರಕವಾದ ಈ ಔಷಧವನ್ನು ತಾವೇ ಸೇವಿಸಿದ್ದಾರೆ ಎಂದು ಡಾ. ಮುರ‌್ರೆ ಪರ ವಕೀಲರು ವಾದಿಸಿದರು.

`ಮೂಳೆಯೇ ಇಲ್ಲದ ಮಾನವ~ ಎಂದು ಖ್ಯಾತರಾಗಿದ್ದ ಜಾಕ್ಸನ್ ಅವರ  ಸಾವಿನ ರಹಸ್ಯ ತಿಳಿಯಲು ವಿಶ್ವದಾದ್ಯಂತದ ಲಕ್ಷಾಂತರ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಒಂದು ವೇಳೆ ಈ ಪ್ರಕರಣದಲ್ಲಿ ಅವರ ಕುಟುಂಬ ವೈದ್ಯರ ಕೈವಾಡ ಸಾಬೀತಾದಲ್ಲಿ, ಅವರು ನಾಲ್ಕು ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ. ವೈದ್ಯಕೀಯ ಪ್ರಮಾಣ ಪತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.