ADVERTISEMENT

ತೆರಿಗೆ ವಂಚನೆ ವಿಕಿಲೀಕ್ಸ್‌ಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ಲಂಡನ್ (ಐಎಎನ್‌ಎಸ್): ವಿಶ್ವದ ಪ್ರಮುಖ ಎರಡು ಸಾವಿರ ಆರ್ಥಿಕ ಸಂಸ್ಥೆಗಳ ವೈಯಕ್ತಿಕ ಲಾಭ ಗಳಿಕೆ  ಮತ್ತು ರಕ್ಷಣಾ ನಿಧಿಗಳ ಖಾತೆಗಳ ಮಾಹಿತಿಗಳನ್ನು ವಿಕಿಲೀಕ್ಸ್‌ಗೆ ನೀಡುವುದಾಗಿ ಬ್ಯಾಂಕ್ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ತೆರಿಗೆಯಿಂದ ತಪ್ಪಿಸಿಕೊಳ್ಳುವ ಸಂಸ್ಥೆಗಳ ತಂತ್ರಗಳ ವಿವರಗಳನ್ನು ಸೋಮವಾರ ವಿಕಿಲೀಕ್ಸ್‌ಗೆ ನೀಡುವುದಾಗಿ ಸ್ವಿಸ್‌ಬ್ಯಾಂಕಿನ ರುಡಾಲ್ಫ್ ಎಲ್ಮರ್ ಹೇಳಿದ್ದಾರೆ. ಎಲ್ಮರ್ ಸ್ವಿಟ್ಜರ್ಲೆಂಡಿನ ಬ್ಯಾಂಕಿಂಗ್ ರಹಸ್ಯ ಕಾನೂನನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದು, ಪ್ರಕರಣದ ವಿಚಾರಣೆಗಾಗಿ ಜ.19ರಂದು ಸ್ವದೇಶಕ್ಕೆ ಮರಳಲಿದ್ದಾರೆ. ಅವರು ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಎದುರಿಸುವ ಸಾಧ್ಯತೆಗಳಿವೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಲಂಡನ್ನಿನ ಫ್ರಂಟ್‌ಲೈನ್ ಕ್ಲಬ್‌ನಲ್ಲಿ ದಾಖಲೆಗಳುಳ್ಳ ಸಿ.ಡಿಯನ್ನು ವಿಕಿಲೀಕ್ಸ್‌ಗೆ ಅವರು ನೀಡಲಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಸುಮಾರು 40 ರಾಜಕಾರಣಿಗಳ ಬಗ್ಗೆ ಸಹ ಮಾಹಿತಿಗಳಿವೆ. ಇದರಲ್ಲಿ ವೈಯಕ್ತಿಕವಾಗಿ ಅಧಿಕ ಲಾಭ ಪಡೆಯುವವರು, ಬಹುರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳು ಮತ್ತು ಆರ್ಥಿಕ ಸಂಸ್ಥೆಗಳು ಸೇರಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಏಷ್ಯಾ ಹೀಗೆ ಎಲ್ಲಾ ದೇಶಗಳಲ್ಲಿನ ಸಂಸ್ಥೆಗಳೂ ತೆರಿಗೆಯಿಂದ ಪಾರಾಗಲು ಗೌಪ್ಯತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ ಎಂದು ಎಲ್ಮರ್ ತಿಳಿಸಿದ್ದಾರೆ.

ADVERTISEMENT

ವಾಣಿಜ್ಯೋದ್ಯಮಿಗಳು, ರಾಜಕಾರಣಿಗಳು, ಬಹುರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳ ಉದ್ಯಮಿಗಳು ರಹಸ್ಯ ಕಾಪಾಡುವುದರಲ್ಲಿ ಪ್ರಮುಖರು. ಜೂಲಿಯಸ್ ಬೇರ್ ಸೇರಿದಂತೆ ಹಲವು ಪ್ರಮುಖ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ತೆರಿಗೆಯಿಂದ ಪಾರಾಗುವ ಸಲುವಾಗಿಯೇ ಅಕ್ರಮ ಹಣಕಾಸಿನ ವಿಚಾರವನ್ನು ರಹಸ್ಯವಾಗಿರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಜೂಲಿಯಸ್ ಬೇರ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಎಲ್ಮರ್ ವಿರುದ್ಧ ಬ್ಯಾಂಕ್ ಮಾಹಿತಿಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿತ್ತು. ಪ್ರಮುಖ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿನ ಅನೈತಿಕತೆ, ಅಪರಾಧ ಚಟುವಟಿಕೆಗಳು ಮುಂತಾದವುಗಳನ್ನು ಪತ್ತೆಹಚ್ಚುವ ವೃತ್ತಿಯನ್ನು ಅವರು ನಿರ್ವಹಿಸುತ್ತಿದ್ದರು.

ಸ್ವಿಸ್ ಬ್ಯಾಂಕಿನ ರಹಸ್ಯ ಕಾನೂನನ್ನು ಉಲ್ಲಂಘಿಸಿ ದಾಖಲೆಗಳನ್ನು ನಕಲು ಮಾಡಿದ್ದು, ಜೂಲಿಯಸ್ ಬೇರ್ ಬ್ಯಾಂಕಿನ ಇಬ್ಬರು ಅಧಿಕಾರಿಗಳಿಗೆ ಬೆದರಿಕೆ ಸಂದೇಶಗಳನ್ನು ರವಾನಿಸಿದ್ದ ಆರೋಪದಲ್ಲಿ ಎಲ್ಮರ್ ಅವರನ್ನು 2005ರಲ್ಲಿ ಬಂಧಿಸಿ ಶಿಕ್ಷೆ ವಿಧಿಸಲಾಗಿತ್ತು. ಎಲ್ಮರ್ ಬ್ಯಾಂಕಿನ ಮೇಲಿನ ವಿಶ್ವಾಸಾರ್ಹತೆಯನ್ನು ಹಾಳುಗೆಡಹುವ ಪ್ರಯತ್ನ ನಡೆಸಿದ್ದಾರೆ.
ಇದಕ್ಕಾಗಿ ಆಧಾರ ರಹಿತ ಆರೋಪ ಮಾಡುತ್ತಿದ್ದು, ಅಕ್ರಮವಾಗಿ ತೆಗೆದುಕೊಂಡಿರುವ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ ಎಂದು ಜೂಲಿಯಸ್ ಬೇರ್ ಬ್ಯಾಂಕ್ ಶುಕ್ರವಾರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.