
ಥಾಯ್ಲೆಂಡ್‌ನಲ್ಲಿ 2013ರ ನವೆಂಬರ್ನಲ್ಲಿ ಆರಂಭವಾದ ಸರ್ಕಾರಿ ವಿರೋಧಿ ಆಂದೋಲನವು ಒಂದು ಸುತ್ತು ಪೂರ್ಣಗೊಳಿಸಿದೆ. ಸೇನೆ ಮತ್ತೆ ಸರ್ಕಾರಿ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಪ್ರಧಾನಿ ಯಿಂಗ್ಲಕ್ ಶಿನವಾತ್ರಾ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಈ ಚಳವಳಿ ನಡೆದಿತ್ತು. ಯಿಂಗ್ಲಿಕ್ ಅವರ ಸೋದರ ಮಾಜಿ ಪ್ರಧಾನಿ ಥಕ್ಸಿನ್ ಶಿನವಾತ್ರಾ ಅವರ ರಾಜಕೀಯ ಪ್ರಭಾವ ಹತ್ತಿಕ್ಕುವುದೂ ಪ್ರತಿಭಟನಾಕಾರರ ಮುಖ್ಯ ಉದ್ದೇಶವಾಗಿತ್ತು.
ಥಕ್ಸಿನ್ ಶಿನವಾತ್ರಾ
ಮೂಲತಃ ಉದ್ಯಮಿಯಾಗಿದ್ದ ಥಕ್ಸಿನ್ ಶಿನವಾತ್ರಾ(64),ಆನಂತರ ರಾಜಕೀಯ ಪ್ರವೇಶಿಸಿ 2001ರಿಂದ 2006ರವರೆಗೆ ಪ್ರಧಾನಿಯಾಗಿದ್ದರು. ಸೇನಾ ಕ್ರಾಂತಿಯಲ್ಲಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಅಧಿಕಾರ ದುರ್ಬಳಕೆ ಆರೋಪದ ಕಾರಣಕ್ಕೆ ಸುಪ್ರೀಂಕೋರ್ಟ್ ಅವರಿಗೆ 2ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿತ್ತು. ಭ್ರಷ್ಟಾಚಾರ ಆರೋಪಗಳ ಕಾರಣಕ್ಕೆ ಶಿಕ್ಷೆಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಥಕ್ಸಿನ್, ಸದ್ಯಕ್ಕೆ ದುಬೈನಲ್ಲಿ ನೆಲೆಸಿದ್ದಾರೆ. ಅವರ ಕಿರಿಯ ಸೋದರಿ ಯಿಂಗ್ಲಕ್ ಶಿನವತ್ರಾ 2011ರಿಂದ ಇತ್ತೀಚಿನವರೆಗೆ ಪ್ರಧಾನಿಯಾಗಿದ್ದರು.
ಕ್ಷಮಾದಾನ ಮಸೂದೆಗೆ ವಿರೋಧ
2004ರಿಂದ ದೇಶದಲ್ಲಿ ನಡೆದ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾದವರ ಕೃತ್ಯಗಳನ್ನು ಮನ್ನಿಸುವ ಸರ್ಕಾರದ ಕ್ಷಮಾದಾನ ಮಸೂದೆಗೆ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಜಿ ಪ್ರಧಾನಿ ಥಕ್ಸಿನ್ ಶಿನವಾತ್ರಾ ಅವರನ್ನೂ ಕ್ಷಮಿಸುವುದು ಸರ್ಕಾರದ ಉದ್ದೇಶವಾಗಿತ್ತು.
ಸರ್ಕಾರದ ಪರ ಇರುವ ‘ರೆಡ್ ಷರ್ಟ್’ ಮತ್ತು ಪ್ರತಿಪಕ್ಷ ಡೆಮಾಕ್ರಾರ್ಟ್ ಪಾರ್ಟಿ - ಮಸೂದೆ ವಿರೋಧಿಸಿದ್ದರಿಂದ ಸೆನೆಟ್‌ನಲ್ಲಿ ಮಸೂದೆಯು ಬಿದ್ದು ಹೋಯಿತು.
ಯಿಂಗ್ಲಕ್ ಸರ್ಕಾರ ಕಿತ್ತೊಗೆಯುವುದು ಮತ್ತು ಅಧಿಕಾರದಿಂದ ಶಿನವಾತ್ರಾ ಕುಟುಂಬವನ್ನು ದೂರ ಇಡುವುದು ಸುಥೆಪ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿತ್ತು.
ಸೆನೆಟ್ ಅನ್ನು ಸಂಪೂರ್ಣವಾಗಿ ಚುನಾಯಿತ ಮಂಡಳಿಯನ್ನಾಗಿ ಮಾಡುವ ಸರ್ಕಾರದ ಸಂವಿಧಾನ ತಿದ್ದುಪಡಿಯನ್ನು ಸಾಂವಿಧಾನಿಕ ನ್ಯಾಯಾಲಯವು ರದ್ದುಪಡಿಸಿತ್ತು. ಆದರೆ, ಸರ್ಕಾರವು ಈ ತೀರ್ಪನ್ನು ಒಪ್ಪಿಕೊಂಡಿರಲಿಲ್ಲ.
ಸರ್ಕಾರಿ ಕಚೇರಿ ಮುತ್ತಿಗೆ
ಸುಥೆಪ್ ನೇತೃತ್ವದಲ್ಲಿನ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು 2013ರ ನವೆಂಬರ್ ನಿಂದ ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಈ ಗೊಂದಲವನ್ನು ಸೇನೆ ದುರ್ಬಳಕೆ ಮಾಡಿಕೊಳ್ಳುವ ಅನುಮಾನದಿಂದ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಬಲ ಪ್ರಯೋಗಿಸಲಿಲ್ಲ.
2013ರ ನವೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ನಡೆದ ಸರ್ಕಾರಿ ವಿರೋಧಿ ಚಳವಳಿಯಲ್ಲಿ ಪ್ರತಿಭಟನಾಕಾರರು, ಸರ್ಕಾರಿ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ನಡೆದ ಸಂಘರ್ಷದಲ್ಲಿ ಹಲವು ಸಾವುಗಳೂ ಸಂಭವಿಸಿವೆ.
ಸಾರ್ವತ್ರಿಕ ಚುನಾವಣೆ
ಡೆಮಾಕ್ರಾಟ್ ಪಾರ್ಟಿಯ 153 ಸಂಸದರು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ ನಂತರ ಪ್ರಧಾನಿ ಯಿಂಗ್ಲಕ್ ಶಿನವಾತ್ರಾ ಅವರು 2013ರ ಡಿಸೆಂಬರ್‌ನಲ್ಲಿ ಪ್ರತಿನಿಧಿಗಳ ಸಭೆ ವಿಸರ್ಜಿಸಿ ಫೆಬ್ರುವರಿ 2ರಂದು ಸಾರ್ವತ್ರಿಕ ಚುನಾವಣೆ ಘೋಷಿಸಿದರು.
ಸರ್ಕಾರಿ ವಿರೋಧಿ ಚಳವಳಿಯು ಚುನಾವಣೆಯನ್ನು ಬಹಿಷ್ಕರಿಸಿತು. ಜನವರಿ ತಿಂಗಳಲ್ಲಿ ರಾಜಧಾನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರತಿಭಟನಾಕಾರರು ಚಳವಳಿ ತೀವ್ರಗೊಳಿಸಿದ್ದರಿಂದ ರಾಜಧಾನಿ ಬ್ಯಾಂಕಾಕ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರವು ತುರ್ತುಪರಿಸ್ಥಿತಿ ಘೋಷಿಸಿ, ಪ್ರತಿಭಟನೆ ಸದೆಬಡೆಯಲು ಪೊಲೀಸರಿಗೆ ಹೆಚ್ಚು ಅಧಿಕಾರ ನೀಡಿತ್ತು. ಪ್ರತಿಭಟನೆ, ಬಹಿಷ್ಕಾರ ಹೊರತಾಗಿಯೂ ದೇಶದಾದ್ಯಂತ ನಡೆದ ಚುನಾವಣೆಯಲ್ಲಿ ಶೇ 48ರಷ್ಟು ಮತದಾನ ನಡೆದಿತ್ತು.
ಕೋರ್ಟ್ ತೀರ್ಪು
ಫೆಬ್ರುವರಿ 2ರಂದು ನಡೆದ ಚುನಾವಣೆಯನ್ನು ಸಾಂವಿಧಾನಿಕ ಕೋರ್ಟ್ ಅಸಿಂಧುಗೊಳಿಸಿತು. ದೇಶದಾದ್ಯಂತ ಒಂದೇ ದಿನ ಮತದಾನ ನಡೆದಿಲ್ಲ ಎಂದು ಕೋರ್ಟ್ ಇದಕ್ಕೆ ಕಾರಣ ನೀಡಿತ್ತು. ಕೊನೆಗೂ ಮೇ 7ರಂದು ಸಾಂವಿಧಾನಿಕ ಕೋರ್ಟ್ ಪ್ರಧಾನಿ ಯಿಂಗ್ಲಕ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು.
ಸೇನಾ ಕ್ರಾಂತಿ
ಮೇ 20ರಂದು ಸೇನೆಯು (ರಾಯಲ್ ಥಾಯಿ ಆರ್ಮಿ) ದೇಶದಾದ್ಯಂತ ಸೇನಾಡಳಿತ ಘೋಷಿಸಿತು. ಎರಡು ದಿನಗಳ ನಂತರ ಉಸ್ತುವಾರಿ ಸರ್ಕಾರದ ವಿರುದ್ಧ ಕ್ರಾಂತಿ ನಡೆಸಿ ಅಧಿಕಾರ ವಶಪಡಿಸಿಕೊಂಡಿತು.
ಅಧಿಕಾರಕ್ಕಾಗಿ ಹೋರಾಟ
ಥಾಯ್ಲೆಂಡ್‌ನಲ್ಲಿ 1932ರಲ್ಲಿ ಅರಸೊತ್ತಿಗೆಯು ಕೊನೆಗೊಂಡ ನಂತರ ಇದುವರೆಗೆ ಸೇನಾ ಪಡೆಗಳು 12 ಬಾರಿ ಸರ್ಕಾರ ಕಿತ್ತೊಗೆದು ಅಧಿಕಾರ ವಶಪಡಿಸಿಕೊಂಡಿವೆ.
ಮೊನ್ನೆ ಮೊನ್ನೆವರೆಗೆ ಪ್ರಧಾನಿಯಾಗಿದ್ದ ಯಿಂಗ್ಲಿಕ್ ಅವರ ಸೋದರ ಥಕ್ಷಿನ್ ಶಿನವಾತ್ರಾ ಅವರನ್ನು 2006ರಲ್ಲಿ ಸೇನೆಯು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ದೇಶದಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಲೇ ಇದೆ.
ಥಕ್ಸಿನ್ ಮತ್ತು ಯಿಂಗ್ಲಕ್ ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಬೆಂಬಲ ಇದ್ದರೆ, ನಗರ ಪ್ರದೇಶದಲ್ಲಿ ಮತ್ತು ಮಧ್ಯಮ ವರ್ಗದವರಲ್ಲಿ ಇವರಿಬ್ಬರನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಿಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.