ADVERTISEMENT

ಥೈಲ್ಯಾಂಡ್: ಅಕಾಲಿಕ ಮಳೆ 15 ಸಾವು, ಲಕ್ಷಾಂತರ ಜನ ಬೀದಿಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 10:50 IST
Last Updated 31 ಮಾರ್ಚ್ 2011, 10:50 IST
ಥೈಲ್ಯಾಂಡ್: ಅಕಾಲಿಕ ಮಳೆ 15 ಸಾವು, ಲಕ್ಷಾಂತರ ಜನ ಬೀದಿಗೆ
ಥೈಲ್ಯಾಂಡ್: ಅಕಾಲಿಕ ಮಳೆ 15 ಸಾವು, ಲಕ್ಷಾಂತರ ಜನ ಬೀದಿಗೆ   

ಬ್ಯಾಂಕಾಕ್ (ಎಎಫ್‌ಪಿ): ಜಪಾನಿನಲ್ಲಿ ತಾಂಡವಾಡಿದ ಸುನಾಮಿಯ ಘೋರ ದುರಂತ ಮರೆಯುವ ಮುನ್ನವೇ ಪ್ರಕೃತಿ ತನ್ನ ಮುನಿಸನ್ನು ಇದೀಗ ಅಕಾಲಿಕ ಮಳೆಯ ರೂಪದಲ್ಲಿ ಬುಧವಾರ ಥೈಲ್ಯಾಂಡ್ ಮೇಲೆ ತೋರಿಸಿದೆ. ಪರಿಣಾಮ ಥೈಲ್ಯಾಂಡ್‌ನಲ್ಲಿ ಪ್ರವಾಹ, ಬಿರುಗಾಳಿ ಜತೆಗೆ ಭೂಕುಸಿತ ಉಂಟಾಗಿ 15 ಜನರು ಮೃತರಾಗಿ ಒಂದು ದಶಲಕ್ಷಕ್ಕೂ ಅಧಿಕ ಜನರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

 ಪ್ರವಾಹದಿಂದ ಏರುತ್ತಿರುವ ನೀರಿಗೆ ಲಕ್ಷಾಂತರ ಮನೆಗಳು ಮುಳುಗಿ, ಅಲ್ಲಲ್ಲಿ ಉಂಟಾದ ಭೂಕುಸಿತದಲ್ಲಿ ಹಲವಾರು ಜನರು ಸಮಾಧಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ ಜನರನ್ನು ಸೈನಿಕರು ಹೆಲಿಕಾಪ್ಟರ್‌ಗಳ ಮೂಲಕ ಪುರ್ನವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.   

 ಈ ನಡುವೆ ದಕ್ಷಿಣ ಭಾಗದಲ್ಲಿ ಏರುತ್ತಿರುವ ನೀರಿನಿಂದಾಗಿ ರಸ್ತೆ ಮತ್ತು ರೈಲು ಸಂಪರ್ಕ ಮಾರ್ಗಗಳು ಸಂಪೂರ್ಣವಾಗಿ ನಾಶವಾಗಿವೆ. ಜತೆಗೆ ವಿಮಾನ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಅಲ್ಲದೆ ಥೈಲ್ಯಾಂಡ್‌ನಿಂದ ಇತರ ರಾಷ್ಟ್ರಗಳಿಗೆ ಸಂಚರಿಸಬೇಕಾಗಿದ್ದ ಹಡಗುಗಳ ಪ್ರಯಾಣವನ್ನು ರದ್ದುಪಡಿಸಲಾಗಿದೆ.  ಇದೀಗ ಥೈಲ್ಯಾಂಡ್‌ನಲ್ಲಿ  ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು. ಈ ವರ್ಷ ಮಾರ್ಚ್ ಥೈಲ್ಯಾಂಡಿಗರ ಪಾಲಿಗೆ ಕರಾಳ ತಿಂಗಳಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.