ADVERTISEMENT

ದಾಳಿ: ಗಡಾಫಿ ಸರ್ಕಾರದ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:00 IST
Last Updated 2 ಏಪ್ರಿಲ್ 2011, 19:00 IST
ದಾಳಿ: ಗಡಾಫಿ ಸರ್ಕಾರದ ಟೀಕೆ
ದಾಳಿ: ಗಡಾಫಿ ಸರ್ಕಾರದ ಟೀಕೆ   

ಟ್ರಿಪೋಲಿ (ಎಎಫ್‌ಪಿ): ‘ಪಶ್ಚಿಮದ ರಾಷ್ಟ್ರಗಳು ಲಿಬಿಯಾದ ಮೇಲೆ ದಾಳಿ ನಡೆಸುತ್ತಿರುವುದು ಅನೈತಿಕ. ಈ ರಾಷ್ಟ್ರಗಳು ಮಾನವೀಯತೆಗೆ ವಿರುದ್ಧವಾದ ಅಪರಾಧಗಳನ್ನು ನಡೆಸುತ್ತಿವೆ’ ಎಂದು ಅಧ್ಯಕ್ಷ ಮುಅಮ್ಮರ್ ಗಡಾಫಿ  ಸರ್ಕಾರದ ವಕ್ತಾರ ಮುಸ್ಸಾ ಇಬ್ರಾಹಿಂ ಆಪಾದಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರ್ಟೆ ಮತ್ತು ಅಜ್ದಬಿಯಾ ನಗರಗಳ ನಡುವಿನ 400 ಕಿ.ಮೀ. ವ್ಯಾಪ್ತಿಯಲ್ಲಿ ನಡೆದಿರುವ ದಾಳಿಗಳು ಇದಕ್ಕೆ ಸಾಕ್ಷಿ. ಮಿತ್ರ ರಾಷ್ಟ್ರಗಳ ಸೇನಾಪಡೆಗಳು ಲಿಬಿಯಾದ ವಾಯು ಮಾರ್ಗವನ್ನು ಅತಿಕ್ರಮ ಮಾಡಿವೆ ಮತ್ತು ವಿಶ್ವಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಕದನ ವಿರಾಮ ಪ್ರಸ್ತಾವ: ‘ನಾವು ಕದನ ವಿರಾಮಕ್ಕೆ ಸಿದ್ಧರಿದ್ದೇವೆ’ ಎಂದು ವಿರೋಧ ಪಕ್ಷಗಳ ನಾಯಕ ಮುಸ್ತಫಾ ಅಬ್ದುಲ್ ಜಲೀಲ್ ಹೇಳಿದ್ದಾರೆ. ಆದರೆ ಈ ವಿಷಯವನ್ನು ತಿರಸ್ಕರಿಸಿರುವ ಇಬ್ರಾಹಿಂ ‘ಬಂಡುಕೋರರು ನಮ್ಮೊಂದಿಗೆ ಕದನ ವಿರಾಮದ ವಿಷಯವನ್ನೇ ಪ್ರಸ್ತಾಪಿಸಿಲ್ಲ. ನಮ್ಮ ಸರ್ಕಾರ ಸದಾ ಶಾಂತಿ ವಾತಾವರಣವನ್ನೇ ಅಪೇಕ್ಷಿಸುತ್ತದೆ. ಆದಾಗ್ಯೂ ಈ ಸಂದರ್ಭದಲ್ಲಿ ಇಂತಹ ಪ್ರಸ್ತಾವ ಮಾಡಿರುವುದು ಒಂದು ತಂತ್ರವಷ್ಟೇ’ ಎಂದಿದ್ದಾರೆ.

ಅಮೆರಿಕ ಪ್ರತಿಕ್ರಿಯೆ: ಕದನ ವಿರಾಮ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಅವೆುರಿಕ ‘ಒಬಾಮ ಸರ್ಕಾರ ಲಿಬಿಯಾದಲ್ಲಿ ಎಂದಿಗೂ ಸಂಘರ್ಷವನ್ನು ಬಯಸುವುದಿಲ್ಲ. ನಾವೇನೋ ಈ ಪ್ರಸ್ತಾವದ ಪರವಾಗಿದ್ದೇವೆ. ಆದರೆ ನಮ್ಮ ಮಿತ್ರ ರಾಷ್ಟ್ರಗಳು ಲಿಬಿಯಾದ ನಾಗರಿಕರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸಿ   ಕೊಳ್ಳಬೇಕೆಂದು ಬಯಸುತ್ತಿದ್ದಾರೆ’ ಎಂದು ಹೇಳಿದೆ. ಈ ಮಧ್ಯೆ ಮಿತ್ರ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ 13 ಜನರು ಸತ್ತಿದ್ದಾರೆ. ಇವರಲ್ಲಿ ನಾಲ್ವರು ನಾಗರಿಕರು, ಉಳಿದವರು ಬಂಡುಕೋರರು. ಗಡಾಫಿ ಬೆಂಬಲಿಗರೆಂದು ತಪ್ಪು ತಿಳಿದ ಮಿತ್ರ ಪಡೆಗಳು ಬಂಡುಕೋರರ ಮೇಲೆ ದಾಳಿ ನಡೆಸಿದಾಗ ಈ ಅಚಾತುರ್ಯ ಸಂಭವಿಸಿದೆ.

ದೇಶ ತೊರೆದ 4 ಲಕ್ಷ ಜನ
ವಿಶ್ವಸಂಸ್ಥೆ (ಐಎಎನ್‌ಎಸ್):
ಲಿಬಿಯಾದಲ್ಲಿ ಸಂಘರ್ಷ ಆರಂಭದಿಂದ ಈವರೆಗೆ ಸುಮಾರು 4 ಲಕ್ಷ ಜನ ದೇಶ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಸುಮಾರು 83 ಸಾವಿರ ವಿದೇಶಿಯರು ತಾಯ್ನಾಡಿಗೆ ಮರಳಿದ್ದಾರೆ.

12 ಸಾವಿರ ಜನ ಗಡಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಂಘರ್ಷದಿಂದ ಅತ್ಯಂತ ತೊಂದರೆ ಅನುಭವಿಸುತ್ತಿರುವ ಪೂರ್ವ ಲಿಬಿಯಾದಲ್ಲಿ ನಾಗರಿಕರಿಗೆ ಆಹಾರ, ದೂರವಾಣಿ ಮತ್ತು ಸರಕು ಸಾಗಣೆಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಯೋಜನೆಯಡಿ ನಾಗರಿಕರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದೆ. ಬೆಂಗಜಿಯಲ್ಲಿ ಸುಮಾರು 85 ಸಾವಿರ ಜನರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇವರಿಗೆ ಮಾನವೀಯ ನೆರವು ನೀಡಲು ಲಿಬಿಯಾದ ರೆಡ್ ಕ್ರೆಸೆಂಟ್ ಪ್ರಯತ್ನ ನಡೆಸಿದೆ. ಸಾವಿರಾರು ಜನರು ಹಿಂಸಾಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT