ADVERTISEMENT

ದಿಟ್ಟ ಬಜೆಟ್ ಮಂಡನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ವಾಷಿಂಗ್ಟನ್(ಪಿಟಿಐ): ಭಾರತ ದೇಶದ ಆರ್ಥಿಕ ಏಳಿಗೆ ಹಾಗೂ ಮುಂದಿನ ತಲೆಮಾರಿನ ಆರ್ಥಿಕ ಸುಧಾರಣೆಗಳನ್ನು ಗುರಿಯಾಗಿಟ್ಟುಕೊಂಡು ದಿಟ್ಟ ಬಜೆಟ್ ಮಂಡಿಸುವಂತೆ ಅಮೆರಿಕ ಕಂಪೆನಿಗಳು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿವೆ.

ಆಹಾರ ಸಮಸ್ಯೆ, ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಬಹುವಿಧದವಸ್ತುಗಳ ಚಿಲ್ಲರೆ ಮಾರಾಟ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆ ಕ್ರಮಗಳಿಗೆ ಆದ್ಯತೆ ನೀಡಲು ಅಮೆರಿಕ-ಭಾರತ ವ್ಯಾಪಾರ ಪರಿಷತ್ ಮನವಿ ಸಲ್ಲಿಸಿದೆ.

ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಮೂಲಕ ತಂತ್ರಜ್ಞಾನ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಪಿಂಚಣಿ ಮತ್ತು ವಿಮಾ ಕ್ಷೇತ್ರಗಳಲ್ಲಿ ದೀರ್ಘಕಾಲದ ಬಂಡವಾಳ ಹೂಡಿಕೆ ಮೂಲಕ ಸಾಮಾಜಿಕ ಭದ್ರತೆಗೆ ಒತ್ತು ನೀಡಬೇಕು. ಇದಕ್ಕಾಗಿಯೇ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಸಲಹೆ ಮಾಡಲಾಗಿದೆ.

ಇಂಥ ದಿಟ್ಟ ಕ್ರಮಗಳಿಂದ ಭಾರತದ 1.20 ಶತಕೋಟಿ ಜನರಿಗೆ ಮಾತ್ರವಲ್ಲದೇ, ಭಾರತದಲ್ಲಿ ಬಂಡವಾಳ ಹೂಡುವ ಅಂತರರಾಷ್ಟ್ರೀಯ ಸಮುದಾಯಕ್ಕೂ ದಿಟ್ಟ ಉತ್ತರ ನೀಡಿದಂತೆ ಆಗುತ್ತದೆ ಎಂದು ಪರಿಷತ್‌ನ ಅಧ್ಯಕ್ಷ ರಾನ್ ಸೊಮರ್ ಹೇಳಿದ್ದಾರೆ.

ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವುದರಿಂದ ಆರ್ಥಿಕ ವೃದ್ಧಿದರ ಹೆಚ್ಚಳವಾಗುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಸರ್ಕಾರದ ಸಾಲದ ಪ್ರಮಾಣ ಕಡಿಮೆ ಆಗುತ್ತದೆ. ಜತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಷತ್‌ನ ಉನ್ನತ ನಿಯೋಗವೊಂದು ಮಾ.18ರಂದು ಭಾರತಕ್ಕೆ ಭೇಟಿ ನೀಡಲಿದೆ. ದೆಹಲಿಯ ನಂತರ ಈ ನಿಯೋಗ ಮುಂಬೈಗೂ ಭೇಟಿ ನೀಡಲಿದ್ದು, ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದೆ. ಉಭಯ ದೇಶಗಳ ನಡುವೆ ವಾಣಿಜ್ಯ ವ್ಯವಹಾರ ವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಎರಡೂ ಸರ್ಕಾರಗಳ ಸಮ್ಮತಿಯೊಂದಿಗೆ ಪರಿಷತ್ 1975ರಲ್ಲಿ ಆರಂಭವಾಗಿದ್ದು, ಅಮೆರಿಕ ಮತ್ತು ಭಾರತದ ಪ್ರಮುಖ 400 ಕಂಪೆನಿಗಳು ಈ ಪರಿಷತ್‌ಸದಸ್ಯತ್ವ ಪಡೆದಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.