ADVERTISEMENT

ಧರ್ಮನಿಂದನೆ: ಪಾಕ್‌ನಲ್ಲಿ ಹಿಂದೂ ದೇವಾಲಯ, ಧರ್ಮಶಾಲೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಕರಾಚಿ (ಪಿಟಿಐ): ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಪವಿತ್ರ ಧರ್ಮ­ಗ್ರಂಥ ವಿರೂ­ಪ­ ಆರೋಪಕ್ಕೆ ಸಂಬಂಧಿ­ಸಿ­ದಂತೆ ಉದ್ರಿಕ್ತರ ಗುಂಪೊಂದು ಹಿಂದೂ ದೇವಾ­ಲಯ ಮತ್ತು ಧರ್ಮ­ಶಾಲೆಗೆ ಶನಿವಾರ ರಾತ್ರಿ ಬೆಂಕಿ ಹಚ್ಚಿದೆ.

ಪರಿಸ್ಥಿತಿ ನಿಯಂ­ತ್ರಿಸಲು ಪೊಲೀ­ಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರು­ವಾಯು ಪ್ರಯೋಗಿಸಿ, ಗುಂಪನ್ನು ಚದು­­ರಿಸಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನ ವಾತಾ­ವರಣ ಇದ್ದು, ಕರ್ಫ್ಯೂ ವಿಧಿ­ಸ­ಲಾಗಿದೆ. ಭದ್ರತೆಯ ಕಾರಣ­ದಿಂದ ಹಿಂದೂ­ಗಳ ಹೋಳಿ ಸಂಭ್ರಮ­ವನ್ನು ಭಾನುವಾರ ರದ್ದುಪಡಿಸಲಾಯಿತು.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಪ್ರಬಲ­ವಿರುವ ಮತ್ತು ಭುಟ್ಟೊ ಕುಟುಂಬದ ತವರು ನಗರ ಲಾರ್ಕಾನದಲ್ಲಿ ಈ ದಾಳಿ ನಡೆದಿದೆ.  ಹಿಂದೂ ವ್ಯಕ್ತಿಯೊಬ್ಬರ ಮನೆ­ಯನ್ನು ಸುತ್ತುವ­ರಿದ ದುಷ್ಕರ್ಮಿಗಳು, ಆತನ ವಿರುದ್ಧ ಧರ್ಮ­ಗ್ರಂಥದ ಕೆಲವು ಪುಟ­ಗಳನ್ನು ಸುಟ್ಟ ಆರೋಪ ಮಾಡಿ­ದರು. ಧರ್ಮ­ನಿಂದನೆ ವದಂತಿ ಹಬ್ಬಿದ ತಕ್ಷಣ ವಿದ್ಯಾರ್ಥಿ­ಗಳು ಮತ್ತು ಧಾರ್ಮಿಕ ಸಂಸ್ಥೆ­ ಅನುಯಾಯಿಗಳು, ಆತ­ನನ್ನು ತಮಗೆ ಒಪ್ಪಿಸುವಂತೆ ಆಗ್ರಹಿಸಿದರು. ಪೊಲೀಸರು ರಕ್ಷಣಾತ್ಮಕವಾಗಿ ಆತ­ನನ್ನು ವಶಕ್ಕೆ ತೆಗೆದು­ಕೊಂಡಿದ್ದಾರೆ.

ಸ್ಥಳೀಯ ಮಾಧ್ಯಮ ವರದಿ ಪ್ರಕಾರ, ಮುಸ್ಲಿ­ಮರ ಮನೆ ಬಾಡಿಗೆ ಪಡೆದಿದ್ದ ಹಿಂದೂ ವ್ಯಕ್ತಿ, ಅದನ್ನು ತೆರವು ಮಾಡು­ವಾಗ ಹಳೆಯ ವಸ್ತುಗಳಿಗೆ ಬೆಂಕಿ ಹಚ್ಚಿದ್ದು, ಆಗ ತಿಳಿಯದೆ ಧರ್ಮ­ಗ್ರಂಥದ ಕೆಲವು ಹಾಳೆಗಳು ಸುಟ್ಟು ಹೋಗಿರುವುದಾಗಿ ಹೇಳಲಾಗಿದೆ.

ಈ ಮಧ್ಯೆ, ಸಿಂಧ್‌ ಪ್ರಾಂತ್ಯದ ಮುಖ್ಯಮಂತ್ರಿ ಸೈಯದ್‌ ಖ್ವೈಮ್‌ ಅಲಿ ಷಾ ಅವರು ಶಾಂತಿ ಕಾಪಾಡಲು ಮತ್ತು ಘಟನೆ ಬಗ್ಗೆ ತನಿಖೆ ಕೈಗೊಳ್ಳಲು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.