ADVERTISEMENT

ಧ್ವಜ ಹರಿದ ಪ್ರಕರಣ: ಭಾರತದ ಕ್ಷಮೆ ಕೋರಿದ ಬ್ರಿಟನ್ ಸರ್ಕಾರ

ಏಜೆನ್ಸೀಸ್
Published 20 ಏಪ್ರಿಲ್ 2018, 17:38 IST
Last Updated 20 ಏಪ್ರಿಲ್ 2018, 17:38 IST
ಪ್ರತಿಭಟನೆ ವೇಳೆ ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿಲಾಗಿತ್ತು –ರಾಯಿಟರ್ಸ್ ಚಿತ್ರ
ಪ್ರತಿಭಟನೆ ವೇಳೆ ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿಲಾಗಿತ್ತು –ರಾಯಿಟರ್ಸ್ ಚಿತ್ರ   

ಲಂಡನ್‌: ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಕೆಲವರು ಅಲ್ಲಿದ್ದ ಭಾರತದ ಧ್ವಜವನ್ನು ಹರಿದು, ಬೆಂಕಿ ಹಚ್ಚಿದ್ದರ ಸಂಬಂಧ ಬ್ರಿಟನ್ ಭಾರತದ ಕ್ಷಮೆಯಾಚಿಸಿದೆ.

‘ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಜನರಿಗಿದೆ. ಆದರೆ ಯಾರೋ ಕೆಲವರು ಧ್ವಜ ಹರಿಯುವ ಕೆಲಸ ಮಾಡಿದ್ದಕ್ಕೆ ನಮಗೂ ತೀವ್ರ ಬೇಸರವಾಗಿದೆ. ನಮಗೆ ಈ ವಿಚಾರ ಗೊತ್ತಾದ ತಕ್ಷಣ, ಅದನ್ನು ಭಾರತದ ಹೈಕಮಿಷನರ್ ಯಶ್ವರ್ಧನ್ ಕುಮಾರ್ ಸಿನ್ಹಾ ಅವರಿಗೆ ತಿಳಿಸಿದೆವು’ ಎಂದು ಬ್ರಿಟನ್‌ನ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿ ಪ್ರಕಟಣೆ ಹೊರಡಿಸಿದೆ.

ಇದಕ್ಕೂ ಮುನ್ನ ಭಾರತವು ಬ್ರಿಟನ್ ಬಳಿ, ಕೃತ್ಯದ ಬಗ್ಗೆ ತನ್ನ ತೀವ್ರ ಅಸಮಾಧಾನವನ್ನು ದಾಖಲಿಸಿತ್ತು. ‘ಭಾರತದ ಧ್ವಜವನ್ನು ಹರಿದು, ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಹೀಗೆ ಮಾಡಿರೆಂದು ಪ್ರತಿಭಟನಾಕಾರರನ್ನು ಪ್ರಚೋದಿಸಿದವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಿ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬ್ರಿಟನ್ ಸರ್ಕಾರವನ್ನು ಆಗ್ರಹಿಸಿತ್ತು.

ADVERTISEMENT

‘ಈ ಕೃತ್ಯದಿಂದ ನಮಗೆ ತೀರಾ ಅಸಮಾಧಾನವಾಗಿದೆ ಎಂಬುದನ್ನು ಅವರಿಗೆ (ಬ್ರಿಟನ್‌) ತಿಳಿಸಿದ್ದೆವು. ಅವರೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

‘ಈ ಕೃತ್ಯದ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಧ್ವಜವನ್ನು ಈಗಾಗಲೇ ಬದಲಿಸಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಇನ್ನೂ ಯಾರನ್ನು ಬಂಧಿಸಿಲ್ಲ’ ಎಂದು ಸ್ಕಾಟ್ಲೆಂಡ್‌ ಯಾರ್ಡ್ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.