ADVERTISEMENT

ನಾಗರಿಕರ ಮೇಲೆ ದಾಳಿ ತಡೆಗೆ ವಿಶ್ವಸಂಸ್ಥೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 15:50 IST
Last Updated 23 ಫೆಬ್ರುವರಿ 2011, 15:50 IST

ವಿಶ್ವಸಂಸ್ಥೆ/ವಾಷಿಂಗ್ಟನ್ (ಪಿಟಿಐ,ಐಎಎನ್‌ಎಸ್): ಭದ್ರತಾ ಪಡೆಗಳನ್ನು ಬಳಸಿಕೊಂಡು ನೂರಾರು ಮುಗ್ಧ ನಾಗರಿಕರ ಹತ್ಯೆ ಎಸಗಿರುವ ಲಿಬಿಯಾದಲ್ಲಿನ ಹಿಂಸೆಗೆ ತಕ್ಷಣ ಕಡಿವಾಣ ಹಾಕಬೇಕೆಂದು ಭಾರತವನ್ನು ಒಳಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ 15 ರಾಷ್ಟ್ರಗಳು ಆಗ್ರಹಿಸಿವೆ. ಇದೇ ವೇಳೆ ತಮ್ಮ ವಿರುದ್ಧ ಪ್ರತಿಭಟಿಸುತ್ತಿರುವ ಜನತೆಯ ಅರ್ಹ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಸರ್ವಾಧಿಕಾರಿ ಮುಅಮ್ಮರ್ ಗಢಾಫಿ  ಮೇಲೆ ಈ ರಾಷ್ಟ್ರಗಳು ಒತ್ತಡ ಹೇರಿವೆ.

ಅತ್ಯಂತ ಪ್ರಭಾವಶಾಲಿ ಸಂಸ್ಥೆಯಾದ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯು ಮಂಗಳವಾರ ರಾತ್ರಿ ಸಭೆ ನಡೆಸಿದ ನಂತರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ರಾಷ್ಟ್ರೀಯ ಮಟ್ಟದಲ್ಲಿ ಮುಕ್ತ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಲಿಬಿಯಾ ಆಡಳಿತಕ್ಕೆ ಸಲಹೆ ನೀಡಿದೆ.

ಲಿಬಿಯಾದಲ್ಲಿರುವ ವಿದೇಶೀಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಯಾವುದೇ ತೊಂದರೆಯಿಲ್ಲದೆ ಅವರು ರಾಷ್ಟ್ರ ಬಿಟ್ಟು ತೆರಳಲು ಅನುಕೂಲ ಮಾಡಿಕೊಡುವಂತೆ ಭಾರತ ಒತ್ತಾಯಿಸಿದೆ.

ADVERTISEMENT

ಲಿಬಿಯಾದಲ್ಲಿ ನಾಗರಿಕರ ವಿರುದ್ಧ ಭದ್ರತಾ ಪಡೆಗಳನ್ನು ಬಳಸಿ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆದಿರುವ ಯತ್ನವನ್ನು ಸಭೆ ಇದೇ ವೇಳೆ ತೀವ್ರವಾಗಿ ಖಂಡಿಸಿತು. ವಿಶ್ವಸಂಸ್ಥೆಯ ರಾಜಕೀಯ ವಿದ್ಯಮಾನಗಳ ಅಧೀನ ಮಹಾ ಕಾರ್ಯದರ್ಶಿ ಬಿ.ಲಿನ್ ಪ್ಯಾಸ್ಕೊ ಮತ್ತು ವಿಶ್ವಸಂಸ್ಥೆಯಲ್ಲಿ ಲಿಬಿಯಾದ ರಾಜತಾಂತ್ರಿಕ ಪ್ರತಿನಿಧಿಯಾಗಿರುವ ಮೊಹಮ್ಮದ್ ಷಾಲ್ಗಮ್ ಸಭೆಯಲ್ಲಿ ಮಾತನಾಡಿದರು.

ಗಢಾಫಿ ನಿಷ್ಠ ಪಡೆಗಳಿಂದ ಜನರ ಮೇಲೆ ನಡೆದಿರುವ ದಾಳಿಗಳನ್ನು ಖಂಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ನವಿ ಪಿಳ್ಳೈ ಅವರು, ಚಳವಳಿಕಾರರ ವಿರುದ್ಧ ನಡೆದಿರುವ ಹಿಂಸಾಚಾರಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ಸಹಾಯಕ ರಾಜತಾಂತ್ರಿಕರಾಗಿರುವ ರೋಸ್‌ಮೇರಿ ಡಿಕ್ಯಾಪ್ರಿಯೊ ಅವರು ಪ್ರತ್ಯೇಕ ಹೇಳಿಕೆ ನೀಡಿ, ‘ಲಿಬಿಯಾದಲ್ಲಿ ನಾಗರಿಕರ ಮೇಲೆ ನಡೆದಿರುವ ಹಿಂಸಾಚಾರವನ್ನು ಜಾಗತಿಕ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ’ ಎಂದಿದ್ದಾರೆ.

ಇದೇ ವೇಳೆ ಪ್ರತಿಭಟನಾಕಾರರ  ಮೇಲೆ ಯುದ್ಧ ವಿಮಾನಗಳನ್ನು ಬಳಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂಬ ಸುದ್ದಿಗಳ ನಂತರ ಜಾಗತಿಕ ಸಮುದಾಯ ಗಢಾಫಿ ಆಡಳಿತದ ವಿರುದ್ಧ ಹೆಚ್ಚೆಚ್ಚು ನಿರ್ಬಂಧಗಳನ್ನು ಹೇರುತ್ತಿದೆ. ನಾಗರಿಕರ ಮೇಲಿನ ದಾಳಿಯನ್ನು ನಿಲ್ಲಿಸುವ ತನಕ ತನ್ನ ಸಭೆಗಳಲ್ಲಿ ಲಿಬಿಯಾ ಭಾಗಿಯಾಗುವುದಕ್ಕೆ ನಿಷೇಧ ಹೇರಿರುವ ಅರಬ್ ಲೀಗ್‌ನ ನಿರ್ಧಾರವನ್ನು ಭದ್ರತಾ ಮಂಡಲಿ ಸ್ವಾಗತಿಸಿದೆ.

ಚಳವಳಿಕಾರರ ಪರ ನಿಂತ ಸಚಿವ: ಪದತ್ಯಾಗ ಮಾಡುವುದಿಲ್ಲ ಎಂದು ಲಿಬಿಯಾ ಸರ್ವಾಧಿಕಾರಿ ಗಢಾಫಿ ಪಟ್ಟು ಹಿಡಿದಿರುವ ಸಂದರ್ಭದಲ್ಲೇ ಸಂಪುಟದ ಒಳಾಡಳಿತ ಸಚಿವ ಅಬ್ದುಲ್ ಫತ್ಹಾ ಯೂನಿಸ್ ಅಲ್ ಅಬಿದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನಾಕಾರರ ಪರ ಕೈಜೋಡಿಸಿದ್ದಾರೆ.

ಗಢಾಫಿ ಅವರ 41 ವರ್ಷಗಳ ದುರಾಡಳಿತದ ವಿರುದ್ಧದ ಜನಾಂದೋಲನವು, ‘ಇನ್ನು ಕೆಲವೇ ದಿನಗಳು ಅಥವಾ ಗಂಟೆಗಳಲ್ಲಿ ಜಯ ಕಾಣಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ಜನಾಂದೋಲನವನ್ನು ಬೆಂಬಲಿಸುವಂತೆ ಲಿಬಿಯಾದ ಸೇನೆಗೆ ಮನವಿ ಮಾಡಿರುವ ಅವರು, ‘ತೀವ್ರ ಹಟವಾದಿಯಾದ ಗಢಾಫಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಥವಾ ಹತ್ಯೆಯಾಗುತ್ತಾರೆ’ ಎಂದು ಸಂಶಯಿಸಿದ್ದಾರೆ.

ಫೆಬ್ರುವರಿ 15ರಿಂದ ಈಚೆಗೆ ಸರ್ಕಾರಿ ಪಡೆಗಳ ದಾಳಿಯಿಂದಾಗಿ 500 ನಾಗರಿಕರು ಹತ್ಯೆಯಾಗಿ 4000ಕ್ಕೂ ಅಧಿಕ  ಜನ ಗಾಯಗೊಂಡಿದ್ದಾರೆಂದು ಅಂತರರಾಷ್ಟ್ರೀಯ ಸಂಘಟನೆಗಳು ಅಂದಾಜಿಸಿವೆ.


ಒಬಾಮ ಮಧ್ಯಪ್ರವೇಶ- ಆಗ್ರಹ: ಲಿಬಿಯಾ ಸರ್ವಾಧಿಕಾರಿ ಗಢಾಫಿ  ತಮ್ಮ ವಿರುದ್ಧ ಎದ್ದಿರುವ ಧ್ವನಿಯನ್ನು ಹತ್ತಿಕ್ಕಲು ನಾಗರಿಕರ ವಿರುದ್ಧ ಯುದ್ಧಕ್ಕೆ ಇಳಿದಿರುವುದಕ್ಕೆ ಕಳವಳಗೊಂಡಿರುವ ಉತ್ತರ ಅಮೆರಿಕದ ಮುಸ್ಲಿ ಸಂಘಟನೆ (ಐಎಸ್‌ಎನ್‌ಎ), ಇದನ್ನು ತಡೆಯಲು ಅಧ್ಯಕ್ಷ ಬರಾಕ್ ಒಬಾಮ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

‘ಅಮೆರಿಕ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಹಿಂದೇಟು ಹಾಕಿದರೆ ವಿಪತ್ತು ನಿಶ್ಚಿತ’ ಎಂದು ಉತ್ತರ ಅಮೆರಿಕದ ಮುಸ್ಲಿ ಸಂಘಟನೆ (ಐಎಸ್‌ಎನ್‌ಎ) ಅಧ್ಯಕ್ಷ ಇಮಾಮ್ ಮೊಹಮ್ಮದ್ ಮಜೀದ್ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.