ADVERTISEMENT

ನಿರುದ್ಯೋಗ ಇಳಿಮುಖ; ಒಬಾಮ ನಿರಾಳ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ವಾಷಿಂಗ್ಟನ್ (ಪಿಟಿಐ): ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿತ್ ರೋಮ್ನಿ ಅವರ ಟೀಕೆಯಿಂದ ಭಾರಿ ಹಿನ್ನಡೆ ಸಾಧಿಸಿದ್ದ ಬರಾಕ್ ಒಬಾಮ ಅವರಿಗೆ ಮಾರನೇ ದಿನವೇ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಅಮೆರಿಕದ ನಿರುದ್ಯೋಗ ಸಮಸ್ಯೆ ಶೇಕಡಾ 8ಕ್ಕಿಂತ ಕಡಿಮೆಯಾಗಿದೆ ಎಂಬ ವರದಿ ಅವರ ಚುನಾವಣಾ ಪ್ರಚಾರದ ದಿಕ್ಕು ಬದಲಿಸಲಿದೆ.

ಹೊಸ ಬೆಳವಣಿಗೆಯಿಂದ ಚೇತರಿಸಿಕೊಂಡಿರುವ ಒಬಾಮ ಅವರು, `ಅಮೆರಿಕ ಮುನ್ನಡೆಯುತ್ತಿದೆ~ ಎಂದು ಹೇಳಿದ್ದಾರೆ.

`ಕಳೆದ ನಾಲ್ಕು ವರ್ಷಗಳು ಆರ್ಥಿಕವಾಗಿ ಭಾರಿ ಕಷ್ಟದ ಕಾಲವಾಗಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ಪ್ರತಿ ತಿಂಗಳು ಎಂಟು ಲಕ್ಷ ಜನರು ನಿರುದ್ಯೋಗಿಗಳಾಗುತ್ತಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ 52 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿ ಕುಸಿದ ಆರ್ಥಿಕ ಸ್ಥಿತಿಗೆ ಪುನಶ್ಚೇತನ ದೊರಕಿದೆ~ ಎಂದು ಒಬಾಮ ಅವರು ವಾರದ ಬಾನುಲಿ ಭಾಷಣದಲ್ಲಿ ತಿಳಿಸಿದ್ದಾರೆ.

ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಶೇಕಡಾ 98ರಷ್ಟು ನಾಗರಿಕರ ತೆರಿಗೆ ಹೊರೆಯನ್ನು ಕಡಿಮೆ ಮಾಡಿ ಶೇಕಡಾ ಎರಡರಷ್ಟು ಇರುವ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸುವ ತಮ್ಮ ಯೋಜನೆಗೆ ಕಾಂಗ್ರೆಸ್ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಗಳು ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಣೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಒಬಾಮ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.