ADVERTISEMENT

ನ್ಯಾಟೊ ಸರಬರಾಜು ಮಾರ್ಗ: ಒಬಾಮ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST

 ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿನ ನ್ಯಾಟೊ ಸರಬರಾಜು ಮಾರ್ಗಗಳನ್ನು ಮರಳಿ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಉತ್ತಮ ಪ್ರಗತಿ ಸಾಧಿಸಿವೆ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಷಿಕಾಗೊದಲ್ಲಿ ಸೋಮವಾರ ಮುಕ್ತಾಯಗೊಂಡ ನ್ಯಾಟೊ ಶೃಂಗಸಭೆಯ ವೇಳೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಜತೆ ನಡೆಸಿದ ಮಾತುಕತೆಯ ನಂತರ ಅವರು ಈ ವಿಷಯ ತಿಳಿಸಿದರು.

ಕೆಲವು ತಿಂಗಳುಗಳಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದನ್ನು      ಒಪ್ಪಿಕೊಂಡ ಅವರು, `ಎರಡು       ರಾಷ್ಟ್ರಗಳ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿರುವ ಸರಬರಾಜು ಮಾರ್ಗ    ವಿವಾದಕ್ಕೆ ಈ ಶೃಂಗಸಭೆಯಲ್ಲಿ ಪರಿಹಾರ        ಕಂಡುಕೊಳ್ಳುತ್ತೇವೆ ಎಂಬ ನಿರೀಕ್ಷೆ     ಇರಲಿಲ್ಲ.  ಇಲ್ಲಿಗೆ ಆಗಮಿಸುವಾಗಲೇ ನಮಗದು ತಿಳಿದಿತ್ತು. ಆದರೆ, ಆ ದಿಸೆಯಲ್ಲಿ ಉತ್ತಮ ಪ್ರಗತಿಯಾಗಿರುವುದಂತೂ ಸತ್ಯ~ ಎಂದು ತಿಳಿಸಿದರು.

ಶೃಂಗಸಭೆಗೆ ತೆರಳುವ ಸಂದರ್ಭದಲ್ಲಿ ಕೆಲವೇ ನಿಮಿಷ ಜರ್ದಾರಿ ಜತೆ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನವು ಆಫ್ಘಾನಿಸ್ತಾನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯ ಒಂದು ಭಾಗವಾಗಿರುವಂತೆ ಅವರಲ್ಲಿ ಮನವಿ ಮಾಡಿದ್ದಾಗಿ ಹೇಳಿದರು.

ಎರಡು ಬಾರಿ ಜರ್ದಾರಿ ಭೇಟಿ

ನ್ಯಾಟೊ ಶೃಂಗ ಸಭೆ ಸಂದರ್ಭದಲ್ಲಿ ಒಬಾಮ ಅವರು ಜರ್ದಾರಿ ಅವರನ್ನು ಎರಡು ಬಾರಿ ಭೇಟಿಯಾಗಿದ್ದಾಗಿ ಶ್ವೇತ ಭವನ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.