ADVERTISEMENT

ನ್ಯಾಯಾಂಗ ನಿಂದನೆ ನೋಟಿಸ್: ಗಿಲಾನಿ ಪದತ್ಯಾಗದ ಇಂಗಿತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು ಗಣ್ಯರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಮರು ವಿಚಾರಣೆಗೆ ಕೈಗೆತ್ತಿಕೊಳ್ಳದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ `ನ್ಯಾಯಾಂಗ ನಿಂದನೆ~ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಇದೇ 19ರ ಒಳಗಾಗಿ ಖ್ದ್ದುದ್ದಾಗಿ ನ್ಯಾಯಾಲಯದ ಎದುರು ಹಾಜರಾಗುವಂತೆಯೂ ಅದು ಪ್ರಧಾನಿಗೆ ಆದೇಶಿಸಿದೆ.        

ಈಗಾಗಲೇ ಮೆಮೊಗೇಟ್ ಹಗರಣದಲ್ಲಿ ಸರ್ಕಾರ ಮತ್ತು ಸೇನೆ ಸಂಘರ್ಷದಲ್ಲಿದ್ದು, ಇದೀಗ ಸುಪ್ರೀಂಕೋರ್ಟ್‌ನ ಈ ಆದೇಶವು ಗಿಲಾನಿ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನೊಂದೆಡೆ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಬಳಿಕ ಅವರು, ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಜತೆ ಸುದೀರ್ಘ ಮಾತುಕತೆ ನಡೆಸಿದರು. ಉಭಯ ನಾಯಕರು ಪ್ರಸಕ್ತ ರಾಜಕೀಯ ಸನ್ನಿವೇಶನಗಳ ಕುರಿತು ಚರ್ಚೆ ನಡೆಸಿದರು.  ಈ ಸಂದರ್ಭದಲ್ಲಿ ಗಿಲಾನಿ,  ದೇಶದ ಪ್ರಜಾಪ್ರಭುತ್ವ ಹಾಗೂ ಸಂಸತ್ ಅನ್ನು ರಕ್ಷಿಸುವ ಸಲುವಾಗಿ ತಾವು ರಾಜೀನಾಮೆ ನಿಡಲು ಸಿದ್ಧ ಎಂದು ಹೇಳಿರುವುದಾಗಿ ಜಿಯೋ ವಾಹಿನಿ ವರದಿ ಮಾಡಿದೆ.

ದೇಶದ ಕುತೂಹಲ ಕೆರಳಿಸಿದ್ದ ಪ್ರಕರಣವನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಸಿರ್-ಉಲ್-ಮುಲ್ಕ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ಪರ ಹೇಳಿಕೆ ನೀಡಲು ನ್ಯಾಯಾಲಯದ ಎದುರು ಹಾಜರಾದ ಅಟಾರ್ನಿ ಜನರಲ್ ಅನ್ವರ್-ಉಲ್-ಹಕ್ ಅವರು ನ್ಯಾಯಮೂರ್ತಿಗಳ ಕೋಪಕ್ಕೆ ಗುರಿಯಾಗಬೇಕಾಯಿತು.

`ನ್ಯಾಯಾಲಯದ ಆದೇಶವನ್ನು ಸರ್ಕಾರಕ್ಕೆ ತಿಳಿಸಿದ್ದೇನೆ. ಆದರೆ, ಇದುವರೆಗೂ ಸರ್ಕಾರಿಂದ ಯಾವುದೇ ಸ್ಪಷ್ಟ ನಿರ್ದೇಶನ ದೊರೆತಿಲ್ಲ~ ಎಂದು ಅಟಾರ್ನಿ ಜನರಲ್ ಹೇಳಿದರು.

`ನ್ಯಾಯಾಲಯದ ಆದೇಶವನ್ನು ಸರ್ಕಾರಕ್ಕೆ ತಿಳಿಸುವುದಷ್ಟೇ ಅಟಾರ್ನಿ ಜನರಲ್ ಕೆಲಸವಲ್ಲ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತರುವುದೂ ಮುಖ್ಯ~ ಎಂದು ನ್ಯಾಯಮೂರ್ತಿ ಮುಲ್ಕ್ ಹರಿಹಾಯ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಹೇಳುವುದು ಇದೆಯೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಇಲ್ಲದಿದ್ದರೆ ನ್ಯಾಯಾಲಯ ಆದೇಶ ನೀಡಲಿದೆ ಎಂದರು. ಆಗ ಹಕ್, ಪ್ರಕರಣ ಇನ್ನೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮೊದಲಿನ ಉತ್ತರವನ್ನೇ ಪುನರುಚ್ಚರಿಸಿದರು. ಇದರಿಂದ ಕೆರಳಿದ ನ್ಯಾಯಮೂರ್ತಿಗಳು ಸರ್ಕಾರದಿಂದ ನಿರ್ದೇಶನ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಹೇಳಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಆಗಲೂ ಮತ್ತದೇ ಉತ್ತರ ನೀಡಿದ ಹಕ್, ಈ ಕುರಿತು ಹೈಕೋರ್ಟ್‌ನಿಂದ ಬೇಕಾದರೆ ಮಾಹಿತಿ ಪಡೆಯುವಂತೆ ಮನವಿ ಮಾಡಿದರು. ಸದ್ಯದ ಸ್ಥಿತಿಯಲ್ಲಿ ಅದರ ಅಗತ್ಯವಿಲ್ಲ ಎಂದು ಮನವಿಯನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳು, ಪ್ರಧಾನಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT