ADVERTISEMENT

ಪರಿಗಣನಾ ಪಟ್ಟಿಯಿಂದ ಇಸ್ರೊ, ಡಿಆರ್‌ಡಿಒ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ವಾಷಿಂಗ್ಟನ್ (ಪಿಟಿಐ): ಭಾರತದ ಜತೆಗಿನ ಉನ್ನತ ವಾಣಿಜ್ಯ ತಾಂತ್ರಿಕತೆ ಮತ್ತು ಕಾರ್ಯತಂತ್ರ ಸಹಭಾಗಿತ್ವಕ್ಕೆ ಪೂರಕವಾಗಿ ಇಸ್ರೊ, ಡಿಆರ್‌ಡಿಒ ಸೇರಿದಂತೆ ಬಾಹ್ಯಾಕಾಶ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಸೇರಿದ ದೇಶದ ಒಂಬತ್ತು ಸಂಸ್ಥೆಗಳನ್ನು ಅಮೆರಿಕ ತನ್ನ ರಫ್ತು ನಿಯಂತ್ರಣ ‘ಪರಿಗಣನಾ ಪಟ್ಟಿ’ಯಿಂದ ಕೈಬಿಟ್ಟಿದೆ.ಇದು ಭಾರತದ ಸುದೀರ್ಘ ಅವಧಿಯ ಬೇಡಿಕೆಯಾಗಿತ್ತು. ಅಲ್ಲದೇ, ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ನವೆಂಬರ್ 8ರಂದು ಪ್ರಕಟಿಸಿದ್ದ ರಫ್ತು ನಿಯಂತ್ರಣ ನೀತಿ ಸುಧಾರಣೆಗೆ ಸಂಬಂಧಿಸಿದ ಮೊದಲ ಹಂತದ ಕ್ರಮವಾಗಿದೆ.

ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲಾಕ್ ಅವರು ಉನ್ನತ ನಿಯೋಗದೊಂದಿಗೆ ಫೆಬ್ರುವರಿ 6ರಂದು ಭಾರತಕ್ಕೆ ಭೇಟಿ ನೀಡಲು ಕೆಲವೇ ದಿನಗಳು ಉಳಿದಿರುವ ಸಂದರ್ಭದಲ್ಲಿ ಸಂಯುಕ್ತ ನೋಂದಣಿ ಕಚೇರಿಯಿಂದ ಈ ಪ್ರಕಟಣೆ ಹೊರಬಿದ್ದಿದೆ. 24 ಉದ್ದಿಮೆಗಳಿಗೆ ಸಂಬಂಧಿಸಿದ ಹೈಟೆಕ್ ವಾಣಿಜ್ಯ ನಿಯೋಗದೊಂದಿಗೆ ಆಗಮಿಸಲಿರುವ ಲಾಕ್, ಬೆಂಗಳೂರು ಮತ್ತು ಮುಂಬೈಗೂ ಬರಲಿದ್ದಾರೆ.

‘ಉಭಯ ದೇಶಗಳ ಕಾರ್ಯತಂತ್ರ ಪಾಲುದಾರಿಕೆ ವೃದ್ಧಿ ಹಾಗೂ ರಫ್ತು ನಿಯಂತ್ರಣ ಸುಧಾರಣೆಗಳತ್ತ ಮುಂದಡಿ ಇಡುವಲ್ಲಿ ಈ ನಿರ್ಧಾರ ಮಹತ್ವದ ಮೈಲಿಗಲ್ಲು’ ಎಂದು ಲಾಕ್ ಅಭಿಪ್ರಾಯಪಟ್ಟಿದ್ದಾರೆ.ಪಟ್ಟಿಯಿಂದ ಹೊರಬಂದ 9 ಸಂಸ್ಥೆಗಳಲ್ಲಿ ಭಾರತ್ ಡೈನಮಿಕ್ಸ್ ಲಿಮಿಟೆಡ್ (ಬಿಡಿಎಲ್), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ)ಯ ಅಂಗಸಂಸ್ಥೆಗಳಾದ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಎಆರ್‌ಡಿಇ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್), ಕ್ಷಿಪಣಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಕೀರ್ಣ, ಘನ ಭೌತ ಪ್ರಯೋಗಾಲಯ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ನಾಲ್ಕು ಅಂಗಸಂಸ್ಥೆಗಳಾದ ದ್ರವ ಪ್ರೇರಕ ವ್ಯವಸ್ಥಾ ಕೇಂದ್ರ, ಬಾಹ್ಯಾಕಾಶ ಘನ ಪ್ರೇರಕ ಘಟಕ (ಎಸ್‌ಪಿಆರ್‌ಒಬಿ), ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರ (ಎಸ್‌ಎಚ್‌ಎಆರ್) ಮತ್ತು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್‌ಎಸ್‌ಸಿ) ಸೇರಿವೆ.

ಈ ಬೆಳವಣಿಗೆಯಿಂದ ಸಂಸ್ಥೆಗಳು ಇನ್ನು ಮುಂದೆ ರಫ್ತಿಗೆ ಸಂಬಂಧಿಸಿದಂತೆ ನಿಯೋಜಿತ ಪರವಾನಗಿ ಪಡೆಯಬೇಕಾದ ಅಗತ್ಯ ಇರುವುದಿಲ್ಲ ಎಂದು ವಾಣಿಜ್ಯ ಇಲಾಖೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ರಫ್ತು ಆಡಳಿತ ನಿಯಂತ್ರಣಕ್ಕೆ ಒಳಪಟ್ಟ ಹಲವು ರಾಷ್ಟ್ರಗಳ ಗುಂಪಿನಿಂದ (ಇಎಆರ್) ಸಹ ಭಾರತ ಹೊರಬರಲಿದೆ. ಈ ಗುಂಪಿಗೆ ಸೇರಿದ ರಾಷ್ಟ್ರಗಳು ರಫ್ತು ಪರವಾನಗಿ ಪಡೆಯಬೇಕಾದುದು ಅತ್ಯವಶ್ಯಕ. ಆದರೆ ಇದೇ ಗುಂಪಿನ ಕ್ಷಿಪಣಿ ತಾಂತ್ರಿಕತೆ ನಿಯಂತ್ರಣ ವ್ಯವಸ್ಥೆ ಎಂಬ ಮತ್ತೊಂದು ಪಟ್ಟಿಗೆ ಭಾರತ ಸೇರಲಿದೆ. ಭಾರತ- ಅಮೆರಿಕದ ಕಾರ್ಯತಂತ್ರ ಸಹಭಾಗಿತ್ವ, ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿದ ಜಾಗತಿಕ ನಿಲುವು ಇತ್ಯಾದಿಗಳಿಗೆ ನವದೆಹಲಿ ಎಷ್ಟರಮಟ್ಟಿಗೆ ಬದ್ಧವಾಗಿರುತ್ತದೆ ಎಂಬುದರ ಮೇಲೆ ಈ ಗುಂಪು ನಿಗಾ ವಹಿಸುತ್ತದೆ.

‘ಈ ಬದಲಾವಣೆ ಜಾಗತಿಕ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಚೌಕಟ್ಟನ್ನು ಬಲಪಡಿಸುವ ಗುರಿ ಮತ್ತು ಬದ್ಧತೆಯನ್ನು ಪುನರುಚ್ಚರಿಸುತ್ತದೆ’ ಎಂದು ವಾಣಿಜ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಎಲ್.ಹಿರ್ಷ್‌ಹಾರ್ನ್ ತಿಳಿಸಿದ್ದಾರೆ.ಭಾರತದ ಎಲ್ಲ ನಾಗರಿಕ ಬಾಹ್ಯಾಕಾಶ ಮತ್ತು ರಕ್ಷಣಾ ಸಂಬಂಧಿ ಸಂಸ್ಥೆಗಳನ್ನು ವಾಣಿಜ್ಯ ಇಲಾಖೆಯ ‘ಪರಿಗಣನಾ ಪಟ್ಟಿ’ಯಿಂದ ತೆಗೆದುಹಾಕುವುದಾಗಿ ಭಾರತಕ್ಕೆ ಭೇಟಿ ನೀಡಿದ್ದಾಗ ಒಬಾಮ ಭರವಸೆ ನೀಡಿದ್ದರು.ಲಾಕ್ ಅವರ ನಿಯೋಗವು ಆಮದು- ರಫ್ತು ಬ್ಯಾಂಕ್ (ಎಕ್ಸಿಂ) ಮತ್ತು ವಾಣಿಜ್ಯ ಅಭಿವೃದ್ಧಿ ಸಂಸ್ಥೆ (ಟಿಡಿಎ)ಯ ಹಿರಿಯ ಅಧಿಕಾರಿಗಳನ್ನು ಒಳಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.