ADVERTISEMENT

ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಕಾರ್ಯಾಚರಿಸುತ್ತಿರುವುದನ್ನು ಒಪ್ಪಿದ ಸಚಿವ ಖ್ವಾಜಾ

ಏಜೆನ್ಸೀಸ್
Published 7 ಸೆಪ್ಟೆಂಬರ್ 2017, 9:39 IST
Last Updated 7 ಸೆಪ್ಟೆಂಬರ್ 2017, 9:39 IST
ಖ್ವಾಜಾ ಅಸೀಫ್‌ (ಸಂಗ್ರಹ ಚಿತ್ರ)
ಖ್ವಾಜಾ ಅಸೀಫ್‌ (ಸಂಗ್ರಹ ಚಿತ್ರ)   

ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೊಳಗಾಗಿರುವ ಲಷ್ಕರ್ ಎ ತೊಯ್ಬಾ(ಎಲ್‌ಇಟಿ), ಜೈಷ್ ಎ ಮೊಹಮ್ಮದ್‌ನಂಥ (ಜೆಇಎಂ) ಉಗ್ರ ಸಂಘಟನೆಗಳು ದೇಶದಲ್ಲಿ ಕಾರ್ಯಾಚರಿಸುತ್ತಿರುವುದನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಒಪ್ಪಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಮುಜುಗರಕ್ಕೊಳಗಾಗುವುದನ್ನು ತಪ್ಪಿಸಲು ಈ ಉಗ್ರ ಸಂಘಟನೆಗಳ ಚಟುವಟಿಕೆಗಳನ್ನು ಹತ್ತಿಕ್ಕಬೇಕಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎಲ್‌ಇಟಿ ಮತ್ತು ಜೆಇಎಂ ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿವೆ ಎಂದು ಬ್ರಿಕ್ಸ್ ಒಕ್ಕೂಟ ಘೋಷಿಸಿದ ಬೆನ್ನಲ್ಲೇ ಖ್ವಾಜಾ ಹೇಳಿಕೆ ಮೂಡಿಬಂದಿದೆ. ಬ್ರಿಕ್ಸ್ ಒಕ್ಕೂಟದಲ್ಲಿ ಪಾಕಿಸ್ತಾನದ ಮಿತ್ರ ರಾಷ್ಟ್ರ ಚೀನಾ ಸಹ ಒಳಗೊಂಡಿದೆ.

ಹಖ್ಖಾನಿ ಜಾಲದಂಥ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ‘ಸುರಕ್ಷಿತ ಸ್ವರ್ಗ’ವಾಗಿ ಪರಿಣಮಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಇತ್ತೀಚೆಗೆ ಆರೋಪಿಸಿದ್ದರು.

ADVERTISEMENT

‘ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರವಾಗುವುದನ್ನು ನಾವು ತಪ್ಪಿಸಬೇಕಿದೆ. ದೇಶದ ಸ್ಥಿತಿ ಸುಧಾರಿಸಿದೆ ಎಂಬುದನ್ನು ನಮ್ಮ ಸ್ನೇಹಿತರಿಗೆ ನಾವು ತಿಳಿಯಪಡಿಸಬೇಕಾದ ಅವಶ್ಯಕತೆ ಇದೆ’ ಎಂದು ಖ್ವಾಜಾ ಹೇಳಿದ್ದಾರೆ. ಶೀಘ್ರದಲ್ಲೇ ಅವರು ಚೀನಾಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯೊಂದರ ಪ್ರತಿನಿಧಿ ಜತೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ಬ್ರಿಕ್ಸ್ ಒಕ್ಕೂಟದ ಘೋಷಣೆಯನ್ನು ಚೀನಾದ ಅಧಿಕೃತ ಘೋಷಣೆ ಎನ್ನಲಾಗದು. ಒಕ್ಕೂಟದಲ್ಲಿ ರಷ್ಯಾ, ಭಾರತ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಸಹ ಇವೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.