ADVERTISEMENT

ಪಾಕಿಸ್ತಾನದ ತಾಲಿಬಾನ್ ಮುಖ್ಯಸ್ಥನ ಹತ್ಯೆ

ಡ್ರೋನ್‌ ಮೂಲಕ ದಾಳಿ: ₹34 ಕೋಟಿ ಬಹುಮಾನ ಘೋಷಿಸಿದ್ದ ಅಮೆರಿಕ

ಪಿಟಿಐ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ಮೌಲಾನಾ ಫಝ್ಲಲ್ಲಾ
ಮೌಲಾನಾ ಫಝ್ಲಲ್ಲಾ   

ವಾಷಿಂಗ್ಟನ್‌/ಇಸ್ಲಾಮಾಬಾದ್‌: ಅಫ್ಗಾನಿಸ್ತಾನದ ಪೂರ್ವ ಭಾಗದ ಕುನಾರ್‌ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ಡ್ರೋನ್‌ ದಾಳಿಯಲ್ಲಿ ಪಾಕಿಸ್ತಾನದ ತಾಲಿಬಾನ್‌ ಸಂಘಟನೆ ಮುಖ್ಯಸ್ಥ ಮೌಲಾನಾ ಫಝ್ಲಲ್ಲಾ ಹತ್ಯೆಗೀಡಾಗಿದ್ದಾನೆ.

ಫಝ್ಲಲ್ಲಾನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದ ಅಮೆರಿಕ, ಈತನ ತಲೆಗೆ ₹34 ಕೋಟಿ ಬಹುಮಾನ ಘೋಷಿಸಿತ್ತು. ಹಲವು ವರ್ಷಗಳಿಂದ ಈತನ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. 2009ರಲ್ಲಿ ಖೈಬರ್‌–ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಈತನ ಹಲವು ಬೆಂಬಲಿಗರು ಸಾವಿಗೀಡಾಗಿದ್ದರು.

ಅಫ್ಗಾನಿಸ್ತಾನದಲ್ಲಿ ಹಿರಿಯ ಭಯೋತ್ಪಾದಕನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿಕೆ ನೀಡಿತ್ತು. ಆದರೆ, ಮೃತಪಟ್ಟ ಭಯೋತ್ಪಾದಕನ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಫ್ಗಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರ ಮೊಹಮ್ಮದ್‌ ರದ್ಮನಿಷ್‌ ಅವರು ಫಝ್ಲುಲ್ಲಾ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ.

ADVERTISEMENT

ಫಝ್ಲುಲ್ಲಾ ಜತೆ ತೆಹ್ರೀಕ್‌–ಇ–ತಾಲಿಬಾನ್‌ನ (ಟಿಟಿಪಿ) ನಾಲ್ವರು ಕಮಾಂಡರ್‌ಗಳು ಸಾವಿಗೀಡಾಗಿದ್ದಾರೆ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.

ಅಮೆರಿಕದ ರಿಮೋಟ್‌ ನಿಯಂತ್ರಿತ ಡ್ರೋನ್‌ ದಾಳಿ ನಡೆಸಿದಾಗ ಫಝ್ಲುಲ್ಲಾ ಮತ್ತು ಆತನ ಕಮಾಂಡರ್‌ಗಳು ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದರು. ಆದರೆ, ತನ್ನ ಸಂಘಟನೆ ಮುಖ್ಯಸ್ಥ ಫಝ್ಲುಲ್ಲಾ ಸಾವಿಗೀಡಾಗಿರುವುದನ್ನು ಟಿಟಿಪಿ ದೃಢಪಡಿಸಿಲ್ಲ.

ಪ್ರವಚನ ನೀಡುತ್ತಿದ್ದ ಫಝ್ಲುಲ್ಲಾ: ಫಝ್ಲುಲ್ಲಾನನ್ನು ‘ರೇಡಿಯೊ ಮುಲ್ಲಾ’  ಮತ್ತು ’ಮೌಲಾನಾ ರೇಡಿಯೊ’ ಎಂದು ಕರೆಯಲಾಗುತ್ತಿತ್ತು. ಖಾಸಗಿ ರೇಡಿಯೊ ಚಾನೆಲ್‌ಗಳಲ್ಲಿ ಧರ್ಮದ ಕುರಿತು ಪ್ರವಚನಗಳನ್ನು ನೀಡುತ್ತಿದ್ದರಿಂದ ಈ ಹೆಸರುಗಳಿಂದ ಫಝ್ಲುಲ್ಲಾನನ್ನು ಕರೆಯಲಾಗುತ್ತಿತ್ತು.

**

ಮಲಾಲಾ ಹತ್ಯೆಗೂ ಸೂಚಿಸಿದ್ದ

2013ರಲ್ಲಿ ಸಂಘಟನೆಯ ಮುಖ್ಯಸ್ಥನಾದ ಬಳಿಕ ಅಮೆರಿಕ ಮತ್ತು ಪಾಕಿಸ್ತಾನದ ಹಲವು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಫಝ್ಲುಲ್ಲಾನನ್ನು ನಿರ್ದೇಶನ ನೀಡಿದ್ದ.  2014ರಲ್ಲಿ ಪೇಷಾವರದ ಆರ್ಮಿ ಪಬ್ಲಿಕ್ ಶಾಲೆ ಮೇಲೆ ನಡೆದ ದಾಳಿಯಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ. ಈ ದಾಳಿಯಲ್ಲಿ 151 ಮಂದಿ ಸಾವಿಗೀಡಾಗಿದ್ದರು.

ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್‌ಝೈ ಹತ್ಯೆ ನಡೆಸುವಂತೆಯೂ ಫಝ್ಲುಲ್ಲಾ 2012ರಲ್ಲಿ ತನ್ನ ಸಹಚರರಿಗೆ ಆದೇಶ ನೀಡಿದ್ದ ಎಂದು ಅಮೆರಿಕ ತಿಳಿಸಿದೆ. 2010 ಮತ್ತು 2014ರಲ್ಲೂ ಫಝ್ಲಲ್ಲಾ ಹತ್ಯೆಯಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳು ಹುಸಿಯಾಗಿದ್ದವು.

**

ಪ್ರವಚನ ನೀಡುತ್ತಿದ್ದ ಫಝ್ಲುಲ್ಲಾ

ಫಝ್ಲುಲ್ಲಾನನ್ನು ’ರೇಡಿಯೊ ಮುಲ್ಲಾ’  ಮತ್ತು ’ಮೌಲಾನಾ ರೇಡಿಯೊ’ ಎಂದು ಕರೆಯಲಾಗುತ್ತಿತ್ತು. ಖಾಸಗಿ ರೇಡಿಯೊ ಚಾನಲ್‌ಗಳಲ್ಲಿ ಧರ್ಮದ ಕುರಿತು ಪ್ರವಚನಗಳನ್ನು ನೀಡುತ್ತಿದ್ದರಿಂದ ಈ ಹೆಸರುಗಳಿಂದ ಫಝ್ಲುಲ್ಲಾನನ್ನು ಕರೆಯಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.