ADVERTISEMENT

ಪಾಕಿಸ್ತಾನ: ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ, ಕನಿಷ್ಠ 10 ಸಾವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 9:47 IST
Last Updated 16 ಡಿಸೆಂಬರ್ 2012, 9:47 IST

ಇಸ್ಲಾಮಾಬಾದ್ (ಐಎಎನ್ಎಸ್): ಸ್ಫೋಟಕ ತುಂಬಿದ ತಮ್ಮ ವಾಹನವನ್ನು ಆವರಣಗೋಡೆಗೆ ಗುದ್ದಿಸುವ ಮೂಲಕ ಪಾಕಿಸ್ತಾನದ ವಿಮಾನ ನಿಲ್ದಾಣವೊಂದರ ಮೇಲೆ ತಾಲಿಬಾನ್ ಉಗ್ರಗಾಮಿಗಳು ಶನಿವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತರಾಗಿದ್ದಾರೆ.

ರಾತ್ರಿ 8.30ರ ವೇಳೆಗೆ ಪೇಷಾವರದ ಬಚಾಖಾನ್ ವಿಮಾನ ನಿಲ್ದಾಣದ ಮೇಲೆ ಉಗ್ರಗಾಮಿಗಳು ಈ ದಾಳಿ ನಡೆಸಿದರು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ  ಉಗ್ರಗಾಮಿಗಳು ವಿಮಾನನಿಲ್ದಾಣದತ್ತ ಐದು ರಾಕೆಟ್ ಗಳನ್ನೂ ಹಾರಿಸಿದ್ದು ಅವುಗಳ ಪೈಕಿ ಎರಡು ರನ್ ವೇಗೆ ಅಪ್ಪಳಿಸಿದವು.

ಮೃತರಲ್ಲಿ ಐವರು ದಾಳಿಕೋರರೂ ಸೇರಿದ್ದು, ಇತರ 40 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಷಿನ್ಹುವಾ ವರದಿ ಮಾಡಿದೆ.

ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ರಾಷ್ಟ್ರದ ಎಲ್ಲ ದೇಶೀ ಹಾಗೂ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ರದ್ದು ಪಡಿಸಲಾಗಿದೆ.

ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆಸಲಾದ ಸೇನಾ ಕಾರ್ಯಾಚರಣೆಯ ವಿರುದ್ಧ ಸೇಡಿನ ಕ್ರಮವಾಗಿ ಈ ದಾಳಿ ನಡೆದಿದೆ ಎಂದು ಸೇನೆ ತಿಳಿಸಿದೆ.

ವಿಮಾನ ನಿಲ್ದಾಣದ ಎಲ್ಲ ಸೊತ್ತುಗಳೂ ಸುರಕ್ಷಿತವಾಗಿವೆ ಎಂದು ವಿಮಾನನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ರಜಾ ಪರ್ವೇಜ್ ಆಶ್ರಫ್ ಘಟನೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.