ADVERTISEMENT

ಪಾಕಿಸ್ತಾನ: ಸುಪ್ರೀಂನಿಂದ ಗಿಲಾನಿ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಮರು ವಿಚಾರಣೆ ನಡೆಸುವಂತೆ ತಾನು ನೀಡಿದ್ದ ಆದೇಶವನ್ನು ಪಾಲಿಸಲು ವಿಫಲವಾಗಿರುವ ಪ್ರಧಾನಿ ಯುಸೂಫ್ ರಜಾ ಗಿಲಾನಿಯವರನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

 ತಾವು ಸ್ವೀಕರಿಸಿದ ಪ್ರಮಾಣವಚನಕ್ಕೆ ಅನುಸಾರವಾಗಿ ಗಿಲಾನಿ ವರ್ತಿಸಿಲ್ಲ. ಅವರು ಅಪ್ರಾಮಾಣಿಕರು ಎಂದು ಹೇಳಿರುವ ಕೋರ್ಟ್, ಜರ್ದಾರಿ ವಿರುದ್ಧದ ಪ್ರಕರಣಗಳ ಮರು ವಿಚಾರಣೆ ನಡೆಸದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ದುರ್ಬಲ ಪಿಪಿಪಿ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಪಾಕ್ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಗಿಲಾನಿ ಅವರಿಗೆ ಛೀಮಾರಿ ಹಾಕಿದೆ. 

`ಗಿಲಾನಿ ಗೌರವಾರ್ಹ ವ್ಯಕ್ತಿಯಲ್ಲ. ಅವರು ತಮ್ಮ ಪ್ರಮಾಣವಚನಕ್ಕೆ ಬದ್ಧರಾಗಿಲ್ಲ. ದೇಶದ ಸಂವಿಧಾನಕ್ಕಿಂತ ತಮ್ಮ ಪಕ್ಷಕ್ಕೆ ಹೆಚ್ಚಿನ ನಿಷ್ಠೆ ತೋರಿದ್ದಾರೆ. ಜರ್ದಾರಿ ಅವರ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿ ಪಡೆಯಲು ಸ್ವಿಸ್ ಅಧಿಕಾರಿಗಳಿಗೆ ಪತ್ರ ಬರೆಯಲು ಸರ್ಕಾರ ನಿರಾಕರಿಸಿ ರುವುದು ಸಂವಿಧಾನ ಮತ್ತು ಕುರಾನ್‌ಗೆ ವಿರುದ್ಧವಾಗಿದೆ~ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಧಾನಿ ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಮತ್ತು ಮುಂದಿನ ಐದು ವರ್ಷಗಳ ಕಾಲ ಸಂಸತ್ ಸದಸ್ಯರಾಗಲು ಅವರು ಅನರ್ಹ ಎಂದು ಘೋಷಿಸುವುದು ಸೇರಿದಂತೆ ಆರು ಆಯ್ಕೆಗಳನ್ನು ಸುಪ್ರೀಂಕೋರ್ಟ್ ಸರ್ಕಾರದ ಮುಂದಿಟ್ಟಿದೆ. ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.