ADVERTISEMENT

ಪಾಕ್:ದಮನಕ್ಕೆ ಹಣದ ಕೊರತೆ-ಗಿಲಾನಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ಇಸ್ಲಾಮಾಬಾದ್(ಐಎಎನ್‌ಎಸ್): ಪಾಕಿಸ್ತಾನ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಯೋತ್ಪಾದಕರ ವಿರುದ್ಧ ಹೊಸ ಸೇನಾ ಕಾರ್ಯಾಚರಣೆ ಮತ್ತು ಇತರ ವೆಚ್ಚಗಳನ್ನು ಭರಿಸಲು ಸರ್ಕಾರ ಅಸಮರ್ಥವಾಗಿದೆ ಎಂದು ದೇಶದ ವಿತ್ತ ಸಚಿವಾಲಯ ಎಚ್ಚರಿಸಿದೆ.

ದೇಶದ ಆರ್ಥಿಕ ಸ್ಥಿತಿ ಬಗ್ಗೆ ನಡೆದ ಮಧ್ಯವಾರ್ಷಿಕ ಲೆಕ್ಕಪರಿಶೋಧನೆ ಸಭೆಯಲ್ಲಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ಕೂಡಾ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ ಎಂದು  ‘ಎಕ್ಸ್‌ಪ್ರೆಸ್ ಟ್ರಿಬ್ಯುನ್’ ತಿಳಿಸಿದೆ.

ಭಯೋತ್ಪಾದಕರ ದಮನಕ್ಕಾಗಿ  ಸೇನಾ ನೆಲೆ ಸ್ಥಾಪನೆ, ಕಾರ್ಯಾಚರಣೆಗಳಿಗೆ ಹೊರಟರೆ ಬೊಕ್ಕಸದ ಮೇಲೆ ಭಾರಿ ಹಣಕಾಸಿನ ಹೊರೆ ಬೀಳುತ್ತದೆ ಇದನ್ನು ಭರಿಸುವ ಶಕ್ತಿ ಸರ್ಕಾರಕ್ಕಿಲ್ಲ ಎಂದು ಗಿಲಾನಿ ತಿಳಿಸಿದ್ದರು.

ADVERTISEMENT

ಆಫ್ಘಾನಿಸ್ತಾನದ ವಜೀರಿಸ್ತಾನದಲ್ಲಿ ಅಡಗಿರುವ ತಾಲಿಬಾನ್, ಅಲ್‌ಖೈದಾ ಉಗ್ರರ ನೆಲೆಗಳನ್ನು ನಾಶಪಡಿಸಲು ನೆರವಾಗಬೇಕೆಂದು ಅಮೆರಿಕ ಸೇನಾ ವರಿಷ್ಠರು ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದರು.

ಅಮೆರಿಕದ ಸೇನಾ ಮುಖ್ಯಸ್ಥ ಅಡ್ಮಿರಲ್ ಮೈಕ್ ಮ್ಯುಲೆನ್ ಈ ಮನವಿ ಮಾಡಿದ್ದರು. ಹಕ್ಕಾನಿ ಮತ್ತು ಅಲ್‌ಖೈದಾ ಉಗ್ರರನ್ನು ನಾಶಪಡಿಸಲು ಪಾಕ್ ತನ್ನ ಸೇನೆಯನ್ನು ರವಾನಿಸಬೇಕು ಎಂದು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಹೊಸ  ‘ಹಣಕಾಸು ಮಿತವ್ಯಯ ಎಚ್ಚರಿಕೆ’ಯನ್ನು ಪ್ರಧಾನಿ ನೀಡಿದ್ದಾರೆ ಎನ್ನಲಾಗಿದೆ.  ಅಮೆರಿಕ್ಕೆ ನೆರವಾಗುವಂತೆ ಹೊಸ ಸೇನಾ ಕಾರ್ಯಾಚರಣೆ ನಡೆಸಿದರೆ ಅದು ದುಬಾರಿ ವೆಚ್ಚ ಉಂಟುಮಾಡುತ್ತದೆ ಎಂಬ ಅಪಾಯ ಗಮನಿಸಿ ಗಿಲಾನಿ ಈ ನಿಲುವು ತಾಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.