ADVERTISEMENT

ಪಾಕ್‌ನಲ್ಲಿ ಬಾಂಬ್ ಸ್ಫೋಟ: 42 ಸಾವು

ಪಿಟಿಐ
Published 23 ಜೂನ್ 2017, 19:30 IST
Last Updated 23 ಜೂನ್ 2017, 19:30 IST
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು  –ಪಿಟಿಐ ಚಿತ್ರ
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದ ಸಾರ್ವಜನಿಕರು –ಪಿಟಿಐ ಚಿತ್ರ   

ಕರಾಚಿ/ಪೇಶಾವರ: ಪಾಕಿಸ್ತಾನದ ಮೂರು ನಗರಗಳಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಒಟ್ಟು 42 ಮಂದಿ ಮೃತಪಟ್ಟಿದ್ದು, 121 ಮಂದಿ ಗಾಯಗೊಂಡಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥರ ಕಚೇರಿ ಬಳಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ.

ಸತ್ತವರಲ್ಲಿ ಏಳು ಪೊಲೀಸರೂ ಸೇರಿದ್ದಾರೆ. ಯಾವುದೇ ಸಂಘಟನೆಗೆ ಇದುವರೆಗೆ ಸ್ಫೋಟದ ಹೊಣೆ ಹೊತ್ತಿಲ್ಲ.

ADVERTISEMENT

‘ಸ್ಫೋಟಕ್ಕೆ ಭಾರತವೇ ಕಾರಣ’ ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಅನ್ವರುಲ್‌ ಹಕ್‌ ಕಾಕರ್‌ ದೂರಿದ್ದಾರೆ.

ಪ್ರಬಲ ಸ್ಫೋಟದಿಂದಾಗಿ ಹಲವು ಕಾರುಗಳಿಗೆ ಹಾನಿಯಾಗಿದೆ. ರಸ್ತೆಯಲ್ಲಿ ಗಾಜಿನ ಚೂರುಗಳು ಬಿದ್ದಿದ್ದವು.

‘ಸ್ಫೋಟದ ತನಿಖೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.  ಸ್ಫೋಟ ನಡೆದ ಸ್ಥಳದಲ್ಲಿ ಶಂಕಿತ ದಾಳಿಕೋರನ ದೇಹದ ಅಂಗಾಂಗಗಳು ಚದುರಿಬಿದ್ದಿದ್ದು, ತಪಾಸಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು  ಕ್ವೆಟ್ಟಾ ಡಿಐಜಿ ಅಬ್ದುಲ್ ರಜಾಕ್ ಸುದ್ದಿಗಾರರಿಗೆ  ತಿಳಿಸಿದ್ದಾರೆ. 

‘ಸ್ಫೋಟಕ್ಕೆ ಸುಮಾರು 75 ಕೆ.ಜಿ.ಯಷ್ಟು ಸ್ಫೋಟಕಗಳನ್ನು ಬಳಸಿರುವ ಸಾಧ್ಯತೆ ಇದೆ’ ಎಂದು ನಾಗರಿಕ ಸಂರಕ್ಷಣಾ ನಿರ್ದೇಶಕ ಅಸ್ಲಾಂ ತಾರೀನ್‌ ಅವರು ಮಾಹಿತಿ ನೀಡಿದ್ದಾರೆ.

ಖಂಡನೆ: ಪ್ರಧಾನಿ ನವಾಜ್‌ ಷರೀಫ್‌ ಅವರು ದಾಳಿಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ದೇಶದಿಂದ ಭಯೋತ್ಪಾದನೆಯನ್ನು ತೊಡೆದುಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ಅವಳಿ ಸ್ಫೋಟದಲ್ಲಿ 25 ಸಾವು: ಪಾಕಿಸ್ತಾನದ ಕುರ್ರಂ ಬುಡಕಟ್ಟು ಜಿಲ್ಲೆಯ ಪರಚಿನಾರ್‌ ಮಾರುಕಟ್ಟೆ ಪ್ರದೇಶದಲ್ಲಿ  ಸಂಭವಿಸಿದ ಅವಳಿ ಬಾಂಬ್‌ ಸ್ಫೋಟದಲ್ಲಿ 25 ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪರಚಿನಾರ್‌ನ ಅಕ್ಬರ್‌ ಖಾನ್‌ ಮಾರುಕಟ್ಟೆಯಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಈ ವೇಳೆ ಇಫ್ತಾರ್‌ ಮತ್ತು ಹಬ್ಬದ ಸಲುವಾಗಿ ಜನರು ಖರೀದಿಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದಿಂದ ತೊಂದರೆಗೆ ಗುರಿಯಾದವರ ನೆರವಿಗೆ ರಕ್ಷಣಾ ಸಿಬ್ಬಂದಿ ಧಾವಿಸಿದ ಸಂದರ್ಭದಲ್ಲಿಯೇ ಮತ್ತೊಂದು ಸ್ಫೋಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.