ADVERTISEMENT

ಪಾಕ್‌ನಲ್ಲಿ ಹೊಸ ಪ್ರಧಾನಿ ಭವಿಷ್ಯವೂ ಡೋಲಾಯಮಾನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಜಾರಿಗೊಳಿಸಿದ ನೂತನ ನ್ಯಾಯಾಂಗ ನಿಂದನೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಅನೂರ್ಜಿತಗೊಳಿಸಿದ್ದು, ಇದರೊಂದಿಗೆ ಅಲ್ಲಿನ ಹೊಸ ಪ್ರಧಾನಿಯ ಭವಿಷ್ಯವೂ ಡೋಲಾಯಮಾನವಾಗಿದೆ.

ರಾಷ್ಟ್ರಾಧ್ಯಕ್ಷರು, ಪ್ರಧಾನ ಮಂತ್ರಿ, ಪ್ರಾಂತ್ಯಗಳ ರಾಜ್ಯಪಾಲರು ಸೇರಿದಂತೆ ಗಣ್ಯ ರಾಜಕಾರಣಿಗಳಿಗೆ ನ್ಯಾಯಾಂಗ ನಿಂದನೆ ನಿಯಮ ಅನ್ವಯವಾಗದ ಕಾಯಿದೆಗೆ ರಾಷ್ಟ್ರಾಧ್ಯಕ್ಷ ಅಸಿಫ್ ಅಲಿ ಜರ್ದಾರಿ ಜುಲೈ 12ರಂದು ಅಂಕಿತ ಹಾಕಿದ್ದರು.

ಈ ಕಾಯಿದೆಯ ಯುಕ್ತಾಯುಕ್ತತೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 25ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ,   `2012ರ ನ್ಯಾಯಾಂಗ ನಿಂದನೆ ಕಾನೂನು ಅಸಂವಿಧಾನಿಕ~ ಎಂದು  ತೀರ್ಪು ಪ್ರಕಟಿಸಿದೆ.

`ಹೊಸ ಕಾಯಿದೆಯನ್ನು ಅನೂರ್ಜಿತಗೊಳಿಸಲಾಗಿದೆ. ಇದರೊಂದಿಗೆ, ಈ ಹಿಂದಿನ 2003ರ ನ್ಯಾಯಾಂಗ ನಿಂದನೆ ಕಾನೂನೇ ಪುನಃ ಅಸ್ತಿತ್ವಕ್ಕೆ ಬಂದಿದೆ. ಯಾವುದೇ ಕಾಯಿದೆಯ ಯಾವುದೇ ನಿಬಂಧನೆಯು ಮೂಲಭೂತ ಹಕ್ಕುಗಳಿಗೆ ಅಥವಾ ಸಾಂವಿಧಾನಿಕ ಕಟ್ಟಲೆಗಳಿಗೆ ವ್ಯತಿರಿಕ್ತವಾಗಿದ್ದರೆ  ಅದನ್ನು ಪರಾಮರ್ಶಿಸುವ ಅಧಿಕಾರ ಈ ನ್ಯಾಯಾಲಯಕ್ಕೆ ಇದೆ. ನೂತನ ಕಾಯಿದೆಯನ್ನು ದುರುದ್ದೇಶದಿಂದಲೇ ಆತುರಾತುರವಾಗಿ ಜಾರಿಗೆ ತರಲಾಗಿದೆ~ ಎಂದು ನ್ಯಾಯಪೀಠವು ಸರ್ಕಾರಕ್ಕೆ ಚಾಟಿ ಬೀಸಿದೆ.

ಜರ್ದಾರಿ ವಿರುದ್ಧದ ಪ್ರಕರಣಗಳ ಮರುತನಿಖೆಗಾಗಿ ಸ್ವಿಟ್ಜರ್‌ಲೆಂಡ್ ಸರ್ಕಾರದ ಜತೆ ವ್ಯವಹರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ ಅರ್ಜಿಯೊಂದು ಇದೇ ಕೋರ್ಟ್‌ನ ಮತ್ತೊಂದು ಪೀಠದ ಮುಂದೆ ಐದು ದಿನಗಳಲ್ಲಿ ವಿಚಾರಣೆಗೆ ಬರಲಿದ್ದು, ಅದಕ್ಕೆ ಮುನ್ನ ಸುಪ್ರೀಂಕೋರ್ಟ್‌ಈ ತೀರ್ಪು ಪ್ರಕಟಿಸಿದೆ. ನ್ಯಾಯಾಂಗ ನಿಂದನೆ ಪ್ರಕರಣಗಳ ಕುರಿತು ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ಚೌಧರಿ ನೇತೃತ್ವದ ನ್ಯಾಯಪೀಠ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಜರ್ದಾರಿ ಅವರ ವಿರುದ್ಧದ ಪ್ರಕರಣಗಳ ಮರುತನಿಖೆಗೆ ತಿರಸ್ಕರಿಸಿದರೆ ಅಶ್ರಫ್ ಕೂಡ ಗಿಲಾನಿ ಅವರಂತೆಯೇ ಪದಚ್ಯುತಗೊಳ್ಳಬಹುದು ಎಂದು ಕಾನೂನು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರಾಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಮರುತನಿಖೆ ಕೈಗೆತ್ತಿಕೊಳ್ಳುವ ಸಲುವಾಗಿ ಸ್ವಿಟ್ಜರ್‌ಲೆಂಡ್ ಸರ್ಕಾರದೊಂದಿಗೆ ಅಧಿಕೃತವಾಗಿ ವ್ಯವಹರಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಪಾಲಿಸದ ಕಾರಣಕ್ಕೆ ಈ ಹಿಂದೆ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಅವರನ್ನು  ಆ ಸ್ಥಾನದಿಂದ ಪದಚ್ಯುತಗೊಳಿಸಿತ್ತು.

ನಂತರದ ಬೆಳವಣಿಗೆಯಲ್ಲಿ, ರಜಾ ಪರ್ವೇಜ್ ಅಶ್ರಫ್ ನೂತನ ಪ್ರಧಾನಿಯಾಗಿ ನೇಮಕಗೊಂಡರು. ಹೊಸ ಸರ್ಕಾರವು, ನ್ಯಾಯಾಲಯದ ಪಾರಮ್ಯಕ್ಕೆ ಸೆಡ್ಡು ಹೊಡೆಯುವ ಜತೆಗೆ ಜರ್ದಾರಿ ಅವರನ್ನು ರಕ್ಷಿಸುವ ಸಲುವಾಗಿ ಹೊಸ ನ್ಯಾಯಾಂಗ ನಿಂದನೆ ಕಾಯಿದೆಯನ್ನು ಜಾರಿಗೆ ತಂದಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.