ADVERTISEMENT

ಪಾಕ್‌ನ ಪಂಜಾಬ್ ಸದನಕ್ಕೆ ಪ್ರಥಮ ಸಿಖ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST
ಅರೋರಾ
ಅರೋರಾ   

ಲಾಹೋರ್ (ಪಿಟಿಐ): ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್ ಸಮುದಾಯದವರ ಪಾಲಿಗೆ ಐತಿಹಾಸಿಕ ಎನ್ನುವಂತೆ ಇದೇ ಮೊದಲ ಬಾರಿಗೆ ದೇಶದ ಸರ್ದಾರ್ ರಮೇಶ್ ಸಿಂಗ್ ಅರೋರಾ ಪಂಜಾಬ್ ಪ್ರಾಂತ್ಯದ ವಿಧಾನಸಭೆ ಪ್ರವೇಶಿಸಿದ್ದಾರೆ.

ಲಾಹೋರ್‌ನಿಂದ 80 ಕಿ.ಮೀ ದೂರದ ನರೊವಾಲ್ ಜಿಲ್ಲೆಗೆ ಸೇರಿದ ರಮೇಶ್ ಸಿಂಗ್ ಪಾಕಿಸ್ತಾನ ಗುರುದ್ವಾರ ಪ್ರಬಂಧಕ ಸಮಿತಿಗೆ ಸೇರಿದ್ದು 340 ಜನ ಸದಸ್ಯ ಬಲದ ಪಂಜಾಬ್ ಪ್ರಾಂತ್ಯದ ವಿಧಾನಸಭೆಯಲ್ಲಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರದ ಸ್ವಾತಂತ್ರ್ಯದ ತರುವಾಯ ಪಂಜಾಬ್ ಪ್ರಾಂತ್ಯದಿಂದ ವಿಧಾನಸಭೆ ಪ್ರವೇಶಿಸುತ್ತಿರುವ ಮೊದಲ ಸಿಖ್ ಕೀರ್ತಿಗೆ ರಮೇಶ್ ಸಿಂಗ್ ಅವರು ಪಾತ್ರರಾಗಿದ್ದಾರೆ.

ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಪಂಜಾಬ್ ಹಾಗೂ ಕೇಂದ್ರದಲ್ಲಿ ಸರ್ಕಾರ ರಚಿಸಿದ ಪಿಎಂಎಲ್-ಎನ್ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಾದ ಸ್ಥಾನಕ್ಕೆ ರಮೇಶ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದೆ.

ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಸಿಂಗ್, `ಪಾಕ್‌ನಲ್ಲಿ ಶಾಂತಿಯುತವಾಗಿ ಜೀವಿಸುತ್ತಿರುವ ಸಿಖ್ ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯದವರ ಪಾಲಿಗೆ ಜೂನ್ 1 ಅವಿಸ್ಮರಣೀಯ ದಿನವಾಗಿದ್ದು ಪಂಜಾಬ್ ವಿಧಾನಸಭೆಯ ಶಾಸಕರಲ್ಲಿ ಮೊದಲ ಬಾರಿಗೆ, ಸಿಖ್ ವ್ಯಕ್ತಿಯಾದ ನನಗೆ ಸ್ಥಾನ ಸಿಕ್ಕಿದ್ದು ಸಂತಸ ತಂದಿದೆ' ಎಂದರು.

ವಿಧಾನಸಭೆಗೆ ನಾಮನಿರ್ದೇಶನ ಮಾಡುವಲ್ಲಿ ಪಿಎಂಎಲ್-ಎನ್ ನಾಯಕ ಅಶನ್ ಇಕ್ಬಾಲ್ ಅವರ ಶ್ರಮವನ್ನು ಶ್ಲಾಘಿಸಿದ ರಮೇಶ್ ಸಿಂಗ್, `ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶ್ರಮವಹಿಸುವುದರ ಜತೆಗೆ ಪಾಕ್ ಗುರುದ್ವಾರ ಪ್ರಬಂಧಕ ಸಮಿತಿಯನ್ನು ಪುನಃಶ್ಚೇತನಗೊಳಿಸಲು ಆದ್ಯತೆ ನೀಡುವೆ' ಎಂದರು.

ವಿಧಾನಸಭೆಗೆ ರಮೇಶ್ ಸಿಂಗ್ ಆಗಮಿಸುತ್ತಲೇ  ಅವರನ್ನು ಹಲವು ಶಾಸಕರು ಹಾಗೂ ಅಧಿಕಾರಿಗಳು ಕೈಕುಲುಕಿ ಸ್ವಾಗತಿಸಿದರು. ಪಂಜಾಬ್ ವಿಧಾನಸಭೆಗೆ ಸಿಂಗ್ ಅವರ ಸೇರ್ಪಡೆಯನ್ನು ಮಾಧ್ಯಮಗಳು `ಸಿಖ್ ಸಮುದಾಯದ ಪಾಲಿಗೆ ಇದೊಂದು ಮೈಲಿಗಲ್ಲು' ಎಂದು ಬಣ್ಣಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT