ADVERTISEMENT

ಪಾಕ್‌ ಮದರಸಾಗಳಿಗೆ ಸೌದಿಯಿಂದ ಹಣದ ಹೊಳೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 8:23 IST
Last Updated 30 ಜನವರಿ 2016, 8:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದ ಮೂಲಭೂತ ಇಸ್ಲಾಮ್‌ವಾದಕ್ಕೆ ಸೌದಿ ಅರೇಬಿಯಾ ಹಣ ಸುರಿಯುತ್ತಿದೆ ಎಂದು ಅಮೆರಿಕದ ಸಂಸದರೊಬ್ಬರು ಆರೋಪಿಸಿದ್ದಾರೆ.

ಭಯೋತ್ಪಾದನೆ ಹಾಗೂ ಮತ್ಸರವನ್ನು ಪೋಷಿಸುವ ಪಾಕಿಸ್ತಾನದ ಸುಮಾರು 24 ಸಾವಿರ ‘ಮದರಸಾ’ಗಳಿಗೆ ಸೌದಿ ಅರೇಬಿಯಾ ‘ಹಣದ ಹೊಳೆ’ ಹರಿಸುತ್ತಿದೆ ಎಂದು ಅಮೆರಿಕದ ಸಂಸದ ಕ್ರಿಸ್‌ ಮರ್ಫಿ ಅವರು ದೂರಿದ್ದಾರೆ.

ಅಮೆರಿಕದ ಅಗ್ರಗಣ್ಯ ಚಿಂತಕರ ಚಾವಡಿಯಾದ ‘ವಿದೇಶಾಂಗ ಸಂಬಂಧಗಳ ಮಂಡಳಿ’ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಅಮೆರಿಕ ಮೌನ ಮುರಿಯಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಪಾಕಿಸ್ತಾನದಲ್ಲಿ 1956ರಲ್ಲಿ 244 ಮದರಸಾಗಳಿದ್ದವು. ಪ್ರಸ್ತುತ 24 ಸಾವಿರ ಮದರಸಾಗಳಿವೆ. ಇವು ವಿಶ್ವ ವ್ಯಾಪಕವಾಗಿ ಹೆಚ್ಚುತ್ತಲೇ ನಡೆದಿವೆ. ಈ ಶಾಲೆಗಳು ಬಹುತೇಕ ಹಿಂಸಾಚಾರವನ್ನು ಬೋಧಿಸುವುದಿಲ್ಲ. ಅವು ಅಲ್‌ಕೈದಾ ಅಥವಾ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳ ಪುಟ್ಟ ಕೂಟಗಳೂ ಅಲ್ಲ. ಆದರೆ, ಷಿಯಾ ವಿರೋಧಿ ಹಾಗೂ ಪಾಶ್ಚಿಮಾತ್ಯ ಯುದ್ಧ ವಿರೋಧಿ ಭಾವನೆಗೆ ಕಾರಣವಾಗುವಂಥ ಸ್ವರೂಪದ ಇಸ್ಲಾಂ ಬಗ್ಗೆ ಕಲಿಸಲಾಗುತ್ತದೆ’ ಎಂದು ಅವರು ಆಪಾದಿಸಿದ್ದಾರೆ.

‘ಪಾಕಿಸ್ತಾನದ 24 ಸಾವಿರ ಧಾರ್ಮಿಕ ಶಾಲೆಗಳ ಪೈಕಿ ಸಾವಿರಾರು ಶಾಲೆಗಳಿಗೆ ಸೌದಿ ಅರೇಬಿಯಾ ಮೂಲದಿಂದ ಹಣ ಹರಿದು ಬರುತ್ತಿದೆ’ ಎಂದು ಮರ್ಫಿ ನುಡಿದರು.

ಕೆಲವು ಅಂದಾಜುಗಳ ಪ್ರಕಾರ, ವಾಹಾಬಿ ಇಸ್ಲಾಂ ಅನ್ನು ಹರಡಲು ಸೌದಿ ಅರೇಬಿಯಾ ರಾಷ್ಟ್ರವು 1960ರಿಂದಲೂ ವಿಶ್ವದಾದ್ಯಂತ ಶಾಲೆಗಳು ಹಾಗೂ ಮಸೀದಿಗಳಿಗೆ ಸುಮಾರು 100 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಹರಿಸಿದೆ.

ಸಂಶೋಧಕರ ಅಂದಾಜಿನ ಪ್ರಕಾರ ಈ ಹಿಂದಿನ ಸೋವಿಯತ್ ಯೂನಿಯನ್‌ ತನ್ನ ಕಮ್ಯುನಿಷ್ಟ್ ಸಿದ್ದಾಂತದ ಪ್ರಚಾರಕ್ಕಾಗಿ
1920–1991ರ ಅವಧಿಯಲ್ಲಿ ಸುಮಾರು ಏಳು ಬಿಲಿಯನ್‌ ಅಮೆರಿಕನ್ ಡಾಲರ್ ಹಣವನ್ನು ವೆಚ್ಚಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.