ADVERTISEMENT

ಪಾಕ್ ಜೈಲು ಉಗ್ರರ ಉಗಮ ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): ಇಲ್ಲಿನ ಜೈಲೊಂದು ಉಗ್ರರ ಉಗಮ ಕೇಂದ್ರವಾಗಿದೆ. ತೆಹ್ರಿಕ್-ಎ-ತಾಲಿಬಾನ್‌ನಂತಹ ನಿಷೇಧಿತ ಸಂಘಟನೆಗಳು ಸೆರೆವಾಸಿಗಳಿಗೆ ತಮ್ಮ ಸಿದ್ಧಾಂತವನ್ನು ಬೋಧಿಸುತ್ತಿವೆ ಎಂದು ಪಾಕ್ ಪ್ರಧಾನಿಯವರಿಗೆ ಮಾನವ ಹಕ್ಕುಗಳ ಸಲಹೆಗಾರರಾಗಿ ಹೊಸದಾಗಿ ನೇಮಕಗೊಂಡಿರುವ ಮುಸ್ತಫಾ ನವಾಜ್ ಖೋಕರ್ ಅಭಿಪ್ರಾಯಪಟ್ಟಿದ್ದಾರೆ.

ಹರಿಪುರ್ ಜೈಲಿಗೆ ಭೇಟಿ ನೀಡಿದ ಅವರು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ಯೂಸುಫ್ ರಜಾ ಗಿಲಾನಿ, ಖೈಬರ್‌ಫಕ್ತೂನ್‌ಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಮತ್ತು ಐಎಸ್‌ಐನ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಪಾಕ್‌ನ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಖೈಬರ್‌ಫಕ್ತೂನ್‌ಖ್ವಾ ಪ್ರಾಂತ್ಯದಲ್ಲಿ ಅತ್ಯಂತ ಹಳೆಯ ಜೈಲು ಇದಾಗಿದೆ. ಅಮೆರಿಕದಲ್ಲಿ ನಡೆದ 9/11 ದಾಳಿಯಲ್ಲಿ ಈ ಜೈಲಿನಲ್ಲಿದ್ದ ಮೂಲಭೂತವಾದದ ಉಗ್ರ ಪ್ರತಿಪಾದಕನಾದ ಮೌಲನಾ ಸೂಫಿ ಮುಹಮ್ಮದ್ ಮತ್ತು ಇತರ ಉಗ್ರರ ಪಾತ್ರವೂ ಇತ್ತು  ಎಂದು ವರದಿ ಹೇಳಿದೆ.

ಶಿಯಾ ಪಂಗಡದ ವಿರೋಧಿ ಗುಂಪುಗಳಾದ ಪಾಕಿಸ್ತಾನಿ ತಾಲಿಬಾನ್ ಮತ್ತು ಸಿಫಾ-ಎ-ಸಬಾ ಪಾಕಿಸ್ತಾನ್ ಸಂಘಟನೆಗಳ ಸದಸ್ಯರು ಈ ಜೈಲಿನಲ್ಲಿ ತಮ್ಮ ಸಿದ್ಧಾಂತವನ್ನು ಪ್ರಚುರ ಪಡಿಸುತ್ತಿದ್ದಾರೆಂದು ಖೋಕರ್ ಅವರ ಪತ್ರದ ಸರಾಂಶವನ್ನು ವರದಿ ಮಾಡಿರುವ ಡಾನ್ ಸುದ್ದಿ ವಾಹಿನಿಯು ತಿಳಿಸಿದೆ.

`ಈ ಜೈಲು ಉಗ್ರವಾದಿಗಳ ಪ್ರಾಥಮಿಕ ಶಾಲೆಯಾಗಿದೆ. ಇಲ್ಲಿ ಉಗ್ರರನ್ನು ಸಾಮಾನ್ಯ ಸೆರೆವಾಸಿಗಳು ಮತ್ತು ಬಾಲಾಪರಾಧಿಗಳೊಂದಿಗೆ ಇರಿಸಲಾಗಿದೆ. ಇಲ್ಲಿನ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ~ ಎಂದು ಪಾಕ್‌ನ ಶಾಂತಿ ಅಧ್ಯಯನ ಸಂಸ್ಥೆ ನಿರ್ದೇಶಕ ಅಮೀರ್ ರಾಣಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.