ADVERTISEMENT

ಪಾಕ್ ಮದರಸಾಗಳಿಗೆ ‘ದೇಣಿಗೆಯ ಸುನಾಮಿ’

ಉಗ್ರವಾದ ಹರಡಲು ಸೌದಿ ಪ್ರಚೋದನೆ: ಅಮೆರಿಕ ಸಂಸದ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಪಾಕ್ ಮದರಸಾಗಳಿಗೆ ‘ದೇಣಿಗೆಯ ಸುನಾಮಿ’
ಪಾಕ್ ಮದರಸಾಗಳಿಗೆ ‘ದೇಣಿಗೆಯ ಸುನಾಮಿ’   

ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಪಾಕಿಸ್ತಾನದ ಸುಮಾರು 24 ಸಾವಿರ ಮದರಸಾಗಳಿಗೆ ಸೌದಿ ಅರೇಬಿಯ ಹೇರಳ ದೇಣಿಗೆ ನೀಡುತ್ತಿದೆ ಎಂದು ಅಮೆರಿಕದ ಸಂಸದರೊಬ್ಬರು ಆರೋಪಿಸಿದ್ದಾರೆ.

ವಿದೇಶಾಂಗ ಸಂಬಂಧಗಳ ಮೇಲಿನ ಅಮೆರಿಕದ ಪ್ರಮುಖ ಚಿಂತಕರ ಚಾವಡಿಯಲ್ಲಿ ಮಾತನಾಡಿದ ಅವರು, ಸೌದಿ ಅರೇಬಿಯ ‘ದೇಣಿಗೆಯ ಸುನಾಮಿ’  ಸೃಷ್ಟಿಸಿದೆ ಎಂದು ದೂರಿದರು.

ಭಯೋತ್ಪಾದನೆ ಮತ್ತು ದ್ವೇಷ ಭಾವನೆಗಳನ್ನು ಬಿತ್ತುವ ಸಲುವಾಗಿ ಸೌದಿಯು ಧಾರ್ಮಿಕ ಶಾಲೆಗಳಿಗೆ ಹೇಗೆ ಹಣ ಹರಿಸುತ್ತಿದೆ ಎಂಬುದಕ್ಕೆ ಪಾಕಿಸ್ತಾನ ಉತ್ತಮ ಉದಾಹರಣೆ ಎಂದು ಸಂಸದ ಕ್ರಿಸ್‌ ಮರ್ಫಿ ಹೇಳಿದ್ದಾರೆ. ಇಸ್ಲಾಂ ಉಗ್ರವಾದವನ್ನು ಪೋಷಿಸುತ್ತಿರುವ ಸೌದಿಯ ಕೃತ್ಯವನ್ನು ಅಮೆರಿಕ ಅಂತ್ಯಗೊಳಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಸೌದಿ ಇನ್ನೊಂದು ಮುಖವಿದೆ: ‘ನಮ್ಮ ಮಿತ್ರರಾಷ್ಟ್ರವಾಗಿರುವ ಸೌದಿಯೊಂದಿಗಿನ ಎಲ್ಲಾ ಸಕಾರಾತ್ಮಕ ಸಂಬಂಧಗಳ ನಡುವೆ ಇದು ಅಹಿತಕರ ಸತ್ಯವಾಗಿದೆ. ಸೌದಿ ಅರೇಬಿಯಕ್ಕೆ ಇನ್ನೊಂದು ಮುಖವಿದೆ. ನಾವು ಮುಖ್ಯವಾಗಿ ಇಸ್ಲಾಮಿಕ್‌ ಉಗ್ರವಾದದ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಮರ್ಫಿ ಹೇಳಿದರು.

ಯೆಮನ್‌ನಲ್ಲಿನ ಸೌದಿಯ ಸೇನಾ ಆಂದೋಲನಕ್ಕೆ ಬೆಂಬಲ ನೀಡುವುದನ್ನು ಅಮೆರಿಕ ನಿಲ್ಲಿಸಬೇಕು. ಇಸ್ಲಾಂ ಮೂಲಭೂತವಾದವನ್ನು ಹರಡುವುದರ ವಿರುದ್ಧ ಸೌದಿಯ ನಿಲುವು ಸ್ಪಷ್ಟವಾಗುವವರೆಗೂ ಈ ನೀತಿ ಮುಂದುವರಿಯಬೇಕು ಎಂದು ಆಗ್ರಹಿಸಿದರು.
*
244ರಿಂದ 24ಸಾವಿರಕ್ಕೆ
‘ಪಾಕಿಸ್ತಾನದಲ್ಲಿ 1956ರ ಸಮಯದಲ್ಲಿ 244 ಮದರಸಾಗಳಿದ್ದವು. ಇಂದು ಅವುಗಳ ಸಂಖ್ಯೆ ಸುಮಾರು 24 ಸಾವಿರಕ್ಕೆ ತಲುಪಿದೆ. ಜಗತ್ತಿನಾದ್ಯಂತ ಈ ಶಾಲೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ’ ಎಂದು ಮರ್ಫಿ ಆತಂಕ ವ್ಯಕ್ತಪಡಿಸಿದರು.

‘ಈ ಶಾಲೆಗಳು ಹಿಂಸೆಯನ್ನು ಬೋಧಿಸುತ್ತಿಲ್ಲ. ಇವು ಅಲ್‌ ಕೈದಾ ಅಥವಾ ಐಎಸ್‌ನ ಅಂಗಸಂಸ್ಥೆಗಳಲ್ಲ. ಆದರೆ ಅತಿಯಾದ ಧಾರ್ಮಿಕ ನಿಷ್ಠೆ, ಶಿಯಾ ವಿರೋಧಿ ಮತ್ತು ಪಾಶ್ಚಿಮಾತ್ಯ ವಿರೋಧಿ ಅಂಶಗಳನ್ನು ಬೋಧಿಸಲಾಗುತ್ತಿದೆ’ ಎಂದರು.

‘ಪಾಕಿಸ್ತಾನದಲ್ಲಿಸಾವಿರಾರು ಮದರಸಾಗಳ ಸ್ಥಾಪನೆಗೆ ಸೌದಿ ಅರೇಬಿಯವೇ ದೇಣಿಗೆ ನೀಡಿದೆ. ಅಂದಾಜಿನ ಪ್ರಕಾರ 1960ರ ದಶಕದಿಂದಲೂ ದ್ವೇಷಪೂರಿತ ಸಂದೇಶ ಹರಡಲು ಸೌದಿಯು  ಶಾಲೆಗಳು ಮತ್ತು ಮಸೀದಿಗಳಿಗೆ ಇದುವರೆಗೂ ₹ 6.5 ಲಕ್ಷ ಕೋಟಿಗೂ ಅಧಿಕ ಮೊತ್ತ ವ್ಯಯಿಸಿದೆ’ ಎಂದರು.

ಕಮ್ಯುನಿಸ್ಟ್‌ ಸಿದ್ಧಾಂತಗಳನ್ನು ಪ್ರಚುರಪಡಿಸಲು ಸೋವಿಯತ್ ಒಕ್ಕೂಟವು 1920 –1991ರ ಅವಧಿಯಲ್ಲಿ ಸುಮಾರು ₹45 ಸಾವಿರ ಕೋಟಿ ಖರ್ಚು ಮಾಡಿತ್ತು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT